ಮಂಗಳೂರು ,ಮಾರ್ಚ್ 27: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿಯಿಂದಾಗಿ ದೇಶಾದ್ಯಂತ ಅಡುಗೆ ಅನಿಲ (LPG) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿತ್ತು. ಈ ಸಂದಿಗ್ಧ ಪರಿಸ್ಥಿತಿಯ ನಡುವೆಯೇ, ಕತಾರ್ನಿಂದ ಬೃಹತ್ ಪ್ರಮಾಣದ ಎಲ್ಪಿಜಿ ಹೊತ್ತ ‘ಅಪೋಲೋ ಓಷನ್’ (Apollo Ocean) ಹೆಸರಿನ ಹಡಗು ಗುರುವಾರ ನವಮಂಗಳೂರು ಬಂದರಿಗೆ (NMPA) ಯಶಸ್ವಿಯಾಗಿ ಆಗಮಿಸಿದೆ.

ಸುಮಾರು 17,000 ಮೆಟ್ರಿಕ್ ಟನ್ ಎಲ್ಪಿಜಿ ಸಾಮರ್ಥ್ಯದ ಈ ಬೃಹತ್ ಹಡಗು ಬಂದರಿನಲ್ಲಿ ಲಂಗರು ಹಾಕಿದ್ದು, ಅನಿಲವನ್ನು ಟ್ಯಾಂಕರ್ಗಳಿಗೆ ವರ್ಗಾಯಿಸುವ ಪ್ರಕ್ರಿಯೆ ಈಗಾಗಲೇ ಚುರುಕುಗೊಂಡಿದೆ. ಈ ಅನಿಲವನ್ನು ಪ್ರಮುಖ ತೈಲ ಮಾರಾಟ ಸಂಸ್ಥೆಗಳಾದ ಇಂಡಿಯನ್ ಆಯಿಲ್ (IOCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಏಜೀಸ್ (Aegis) ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಇದು ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿನ ತಕ್ಷಣದ ಬೇಡಿಕೆಯನ್ನು ಪೂರೈಸಲು ವರದಾನವಾಗಲಿದೆ.
ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಹಡಗುಗಳ ಸಂಚಾರದಲ್ಲಿ ಉಂಟಾಗಿದ್ದ ಅಡೆತಡೆಗಳು ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಗೆ ಕಾರಣವಾಗಿದ್ದವು. ಇದರಿಂದ ಹೋಟೆಲ್ ಉದ್ಯಮ, ಸಣ್ಣ ಕೈಗಾರಿಕೆಗಳು ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದೀಗ ಬೃಹತ್ ಪ್ರಮಾಣದ ಅನಿಲ ಬಂದಿಳಿದಿರುವುದು ಮಾರುಕಟ್ಟೆಯಲ್ಲಿನ ಈವರೆಗಿನ ಆತಂಕವನ್ನು ಶಮನಗೊಳಿಸುವ ನಿರೀಕ್ಷೆಯಿದೆ.
ನವಮಂಗಳೂರು ಬಂದರು ಪ್ರಾಧಿಕಾರವು ಇಂಧನ ಮತ್ತು ಅನಿಲ ಹೊತ್ತ ಹಡಗುಗಳ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. “ಯುದ್ಧದ ಭೀತಿಯಿಂದ ಪೂರೈಕೆಯಲ್ಲಿ ಅಲ್ಪಮಟ್ಟದ ವ್ಯತ್ಯಯವಾಗಿದ್ದರೂ, ಪ್ರಸ್ತುತ ದಾಸ್ತಾನು ಮತ್ತು ಆಗಮಿಸುತ್ತಿರುವ ಹಡಗುಗಳಿಂದಾಗಿ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸಲಿದೆ,” ಎಂದು ಬಂದರು ಮೂಲಗಳು ತಿಳಿಸಿವೆ. ಮಾರ್ಚ್ ಅಂತ್ಯದ ವೇಳೆಗೆ ಇನ್ನಷ್ಟು ಎಲ್ಪಿಜಿ ಟ್ಯಾಂಕರ್ಗಳು ಮಂಗಳೂರಿಗೆ ಬರುವ ಸಾಧ್ಯತೆಯಿದೆ.