ಬೀದರ್, ಮಾರ್ಚ್ 17: ಗ್ಯಾಸ್ ಬೆಲೆ ಏರಿಕೆ ಮತ್ತು ಕೊರತೆಯನ್ನು ದುರುಪಯೋಗಪಡಿಸಿಕೊಂಡು ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿದ್ದ ದಂಧೆಯನ್ನು ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆಯಲ್ಲಿ ಬಯಲು ಮಾಡಿದ್ದಾರೆ.

ಜನವಾಡ ಗ್ರಾಮದ ಹೊಲದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು ₹2.55 ಲಕ್ಷ ಮೌಲ್ಯದ 105 ಎಲ್ಪಿಜಿ ಸಿಲಿಂಡರ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಗೃಹಬಳಕೆ ಹಾಗೂ ವಾಣಿಜ್ಯ ಸಿಲಿಂಡರ್ಗಳನ್ನು ಇಂಡಿಯನ್ ಮತ್ತು ಎಚ್ಪಿ ಗ್ಯಾಸ್ ಏಜೆನ್ಸಿಗಳಿಂದ ಕಾಳಸಂತೆಗೆ ಹರಿಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ₹1,000ಕ್ಕೆ ದೊರೆಯುವ ಗೃಹಬಳಕೆ ಸಿಲಿಂಡರ್ಗಳನ್ನು ₹2,000ಕ್ಕೂ ಹೆಚ್ಚು ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಗ್ಯಾಸ್ ಕೊರತೆಯನ್ನು ಬಂಡವಾಳ ಮಾಡಿಕೊಂಡ ಆರೋಪಿಗಳು ಈ ಅಕ್ರಮ ವ್ಯವಹಾರ ನಡೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.