ಬೆಂಗಳೂರು, ಮಾರ್ಚ್ 30: ನಗರದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ವಲಯಕ್ಕೆ ರಾಜ್ಯ ಸರ್ಕಾರದಿಂದ ಮಹತ್ವದ ಪರಿಹಾರ ದೊರಕಿದೆ. ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಹೋಟೆಲ್ ಮಾಲೀಕರಿಗೆ ಭರವಸೆ ನೀಡಿದ್ದು, ನಾಳೆಯಿಂದ 17,500 ಹೆಚ್ಚುವರಿ ಎಲ್ಪಿಜಿ ಸಿಲಿಂಡರ್ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಸಿಲಿಂಡರ್ಗಳನ್ನು ಈಗಾಗಲೇ ವಿತರಕರಿಗೆ ರವಾನಿಸಲಾಗುತ್ತಿದ್ದು, ನಾಳೆಯಿಂದ ಹಂತ ಹಂತವಾಗಿ ಹೋಟೆಲ್ಗಳಿಗೆ ಪೂರೈಕೆ ಪ್ರಾರಂಭವಾಗಲಿದೆ ಎಂದರು. ವಿತರಣಾ ಪ್ರಕ್ರಿಯೆಗೆ ಸ್ವಲ್ಪ ಸಮಯ ಬೇಕಾದರೂ, ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕಳೆದ ಕೆಲವು ದಿನಗಳಿಂದ ಎಲ್ಪಿಜಿ ಕೊರತೆಯಿಂದ ಹೋಟೆಲ್ಗಳು ತೀವ್ರ ತೊಂದರೆ ಅನುಭವಿಸುತ್ತಿದ್ದವು. ಈ ಹೆಚ್ಚುವರಿ ಪೂರೈಕೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಇನ್ನೊಂದೆಡೆ, ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ವಿತರಣೆಯಲ್ಲಿಯೂ ವಿಳಂಬವಾಗುತ್ತಿರುವುದಾಗಿ ಸಚಿವರು ತಿಳಿಸಿದ್ದಾರೆ. ಗ್ರಾಹಕರು ಅನಗತ್ಯವಾಗಿ ಡಿಸ್ಟ್ರಿಬ್ಯೂಟರ್ ಕಚೇರಿಗಳಿಗೆ ತೆರಳಬಾರದು ಎಂದು ಮನವಿ ಮಾಡಿರುವ ಅವರು, ನಗರ ಪ್ರದೇಶಗಳಲ್ಲಿ 25 ದಿನಗಳ ಬಳಿಕ ಬುಕ್ಕಿಂಗ್ ಮಾಡಿದರೆ ಸಿಲಿಂಡರ್ ಲಭ್ಯವಾಗಲಿದೆ; ಗ್ರಾಮಾಂತರ ಪ್ರದೇಶಗಳಲ್ಲಿ ಇದು ಸುಮಾರು 45 ದಿನಗಳವರೆಗೆ ತೆಗೆದುಕೊಳ್ಳಬಹುದು ಎಂದು ವಿವರಿಸಿದರು.