ಕಾರವಾರ ನವೆಂಬರ್ 04: ಕಾರವಾರ ಸಮುದ್ರತೀರದಲ್ಲಿ ಮೀನನ ಸುಗ್ಗಿಯಾಗಿದೆ. ಸಮುದ್ರ ಭಾಗದ ತೀರದಲ್ಲಿ ಮೀನಿನ ಹೊಳೆಯೆ ಹರಿದಿದ್ದು, ಮೀನುಗಾರರಿಗೆ ಹಬ್ಬವಾಗಿದೆ.

ಮೀನುಗಾರಿಕಾ ಋತು ಆರಂಭವಾದರೂ ಮೀನುಗಾರರಿಗೆ ಅಷ್ಟೇನು ದೊಡ್ಡ ಮಟ್ಟದಲ್ಲಿ ಮೀನಿನ ಭೇಟೆಯಾಗಿಲ್ಲ. ಅದರ ನಡುವೆ ಸೈಕ್ಲೋನ್ ಅಬ್ಬರಕ್ಕೆ ಮೀನುಗಾರರು ತಮ್ಮ ಬೋಟ್ ಗಳನ್ನು ದಡಕ್ಕೆ ಸೇರಿಸಿದ್ದರು. ಇದೀಗ ಸೈಕ್ಲೋನ್ ಎಲ್ಲ ಮುಗಿದ ಮೇಲೆ ಮೀನುಗಾರಿಕೆಗೆ ತೆರಳಿದ ಮೀನುಗಾರರಿಕೆ ಅಚ್ಚರಿ ಕಾದಿದ್ದು. ಸಮುದ್ರದಲ್ಲಿ ಮೀನುಗಳ ದಂಡೇ ಹರಿದು ಬರುತ್ತಿದ್ದು, ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕಾರವಾರ, ಬೇಲಿಕೇರಿ, ಮುದಗ ಬಂದರಿನಿಂದ ಹೊರಟ ಮೀನುಗಾರರು ಅರಬ್ಬಿ ಸಮುದ್ರದಲ್ಲಿ ದೊಡ್ಡ ಮಟ್ಟದ ತಾರ್ಲೆ (ಭೂತಾಯಿ) ಮೀನುಗಳ ಭರ್ಜರಿ ಬೇಟೆ ಮಾಡಿದ್ದಾರೆ.

ಕಾರವಾರ ಸಮೀಪದ ಅರಬ್ಬಿ ಸಮುದ್ರ ಭಾಗದಲ್ಲಿ ಲಕ್ಷಾಂತರ ತಾರ್ಲೆ ಮೀನುಗಳು ಸಿಕ್ಕಿವೆ. ಆಳ ಸಮುದ್ರಕ್ಕೆ ತೆರಳದೇ ತೀರ ಸಮೀಪದಲ್ಲೇ ರಾಶಿ ರಾಶಿ ಮೀನುಗಳನ್ನು ಹಿಡಿದಿದ್ದಾರೆ. ಹಲವು ವರ್ಷದ ನಂತರ ಈ ಮಟ್ಟದ ತಾರ್ಲೆ ಮೀನುಗಳು ಮೀನುಗಾರರಿಗೆ ದೊರೆತಿವೆ. ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ.



