ಉಡುಪಿ, ಡಿಸೆಂಬರ್​​ 29: ಮೊಟ್ಟೆ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿಕ್ಕಿ ಹೊಡೆದ ಬಳಿಕ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಮೇಲೆ ಕ್ಯಾಂಟರ್​​ ಮಗುಚಿ ಬಿದ್ದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ನಡೆದಿದೆ.


ಸೋಮವಾರ ಬೆಳಿಗ್ಗೆ ನಿಟ್ಟೆ ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು. ಲಾರಿಯು ಅತಿ ವೇಗವಾಗಿ ಬಂದು ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಅದೇ ಸಮಯದಲ್ಲಿ ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಲಾರಿ ಬಿದಿದ್ದು, ಘಟನೆಯಿಂದ ವ್ಯಕ್ತಿಯ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂ ಆಗಿದ್ದು, ಕಾರು ಚಾಲಕ ಗಾಯಗೊಂಡಿದ್ದಾರೆ.​ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.


ಅಪಘಾತದ ಭೀಕರತೆ ಲಾರಿಯಲ್ಲಿದ್ದ ಸಾವಿರಾರು ಮೊಟ್ಟೆಗಳು ರಸ್ತೆಯುದ್ದಕ್ಕೂ ಬಿದ್ದು ಒಡೆದು ಹೋಗಿವೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಮೊಟ್ಟೆಗಳು ನಷ್ಟವಾಗಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳಕ್ಕೆ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ .

Share Information