ಲಾಕ್ ಡೌನ್ ನಡುವೆ ಸರಕಾರಿ ಕಛೇರಿ ಮಹಡಿ ಏರಿದ್ದ ನಾಯಿ ರಕ್ಷಣೆ

ಪುತ್ತೂರು ಎಪ್ರಿಲ್ 21: ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಸರಕಾರಿ ಕಛೇರಿಯ ಮಹಡಿ ಏರಿದ್ದ ನಾಯಿಯೊಂದು ನಾಲ್ಕು ದಿನಗಳಿಂದ ಮಹಡಿಯಲ್ಲೇ ಅನ್ನ ನೀರಿಲ್ಲದೆ ಸಿಲುಕಿದ್ದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ತಾಲೂಕು ಪಂಚಾಯತ್ ಕಟ್ಟಡದ ಮುಖ್ಯ ಗೇಟ್ ನಿಂದ ತಾಲೂಕು ಪಂಚಾಯತ್ ನ ಮೇಲ್ಛಾವಣಿ ಏರಿದ್ದ ನಾಯಿ ಮತ್ತೆ ಕೆಳಗೆ ಬರುವ ಸಂದರ್ಭದಲ್ಲಿ ಗೇಟ್ ಗೆ ಬೀಗ ಹಾಕಲಾಗಿತ್ತು. ಇದನ್ನು ಗಮನಿಸಿದ ನಾಯಿ ಮೇಲ್ಛಾವಣಿಗೆ ತಾಗಿಕೊಂಡೇ ಇರುವ ನ್ಯಾಯಾಲಯದ ಕ್ಯಾಂಟೀನ್ ಮೇಲ್ಛಾವಣಿ ಮೂಲಕ ಕೆಳಗಿಳಿಯಲು ಯತ್ನಿಸಿದೆ. ಆದರೆ ಕೆಳಗಿಳಿಯಲು ಸಾಧ್ಯವಾಗದ ಕಾರಣ ಕ್ಯಾಂಟೀನ್ ನ ಮೇಲ್ಛಾವಣಿಯಲ್ಲೇ ಸಿಲುಕಿಕೊಂಡಿತ್ತು.

ಲಾಕ್ ಡೌನ್ ಹಿನ್ನಲೆಯಲ್ಲಿ ನ್ಯಾಯಾಲಯ ಹಾಗೂ ತಾಲೂಕು ಪಂಚಾಯತ್ ಮುಚ್ಚಿದ್ದ ಕಾರಣ ಈ ಭಾಗಕ್ಕೆ ಯಾರೂ ಕೂಡಾ ಭೇಟಿ ನೀಡಿರಲಿಲ್ಲ. ಆದರೆ ನಾಯಿಯ ನಿರಂತರ ಆಕ್ರಂದನ ಕೇಳಿದ ಪುತ್ತೂರು ನಗರಸಭೆಯ ಸದಸ್ಯರೋರ್ವರು ಪ್ರಾಣಿಪ್ರಿಯರಿಗೆ ಈ ವಿಚಾರ ತಿಳಿಸಿದ್ದು, ತಂಡದ ಸದಸ್ಯರು ಬಂದು ನಾಯಿಯನ್ನು ಮೇಲ್ಛಾವಣಿಯಿಂದ ಇಳಿಸಿ, ಆಹಾರ ನೀಡಿ ನಾಯಿಯ ಜೀವ ಉಳಿಸಿದ್ದಾರೆ.