ಹಿಂದೂ ನಾಯಕರ ಹತ್ಯೆಗೆ ಸಂಚು ಬಿಜೆಪಿಯ ಲೋಕಸಭಾ ಚುನಾವಣಾ ಗಿಮಿಕ್ – ಎಸ್ ಡಿ ಪಿಐ

ಮಂಗಳೂರು ಜನವರಿ 11: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸಂಘಪರಿವಾರದ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಕೆಲವೊಂದು ಮಾಧ್ಯಮಗಳ ಮೂಲಕ ಪ್ರಚಾರ ಪಡಿಸಿ ಮತ್ತೊಮ್ಮೆ ಹಿಂದೂ ಮತಗಳನ್ನು ಕ್ರೋಢೀಕರಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯನ್ನು ಸುಲಭವಾಗಿ ಗೆಲ್ಲುವ ಒಂದು ಪ್ರಯತ್ನವಾಗಿದೆ ಎಂದು ಎಸ್ ಡಿಪಿಐ ಆರೋಪಿಸಿದೆ.

ಹತ್ಯೆ ಅಂತಹ ಸತ್ಯಕ್ಕೆ ನಿಲುಕದ ಸುಳ್ಳು ಸುದ್ದಿಗಳನ್ನು ಬಿಜೆಪಿ ಪಕ್ಷವು ಪ್ರತಿಯೊಂದು ಚುನಾವಣೆಯ ಸಂದರ್ಭದಲ್ಲೂ ಛೂ ಬಿಡುತ್ತದೆ.  ಆದರೆ ಈ ಸುದ್ದಿ ಎಲ್ಲಿಂದ ಬಂತು ಯಾರು ಇದರ ಹಿಂದೆ ಇರುವವರು ಎಂಬುದರ ಬಗ್ಗೆ ತನಿಖೆ ನಡೆಸಿದಾಗ ನಿಖರವಾದ ಮಾಹಿತಿಗಳು ಪೊಲೀಸ್ ಇಲಾಖೆಗೆ ಸಿಕ್ಕಿರುವುದಿಲ್ಲ.

ಮುಸ್ಲಿಂ ನಾಯಕರಿಗೆ ನೇರವಾಗಿ ಬೆದರಿಕೆ ಬಂದ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದವರು ಸಂಘಪರಿವಾರದ ಕ್ರಿಮಿನಲ್ ನಾಯಕರಿಗೆ ಸರಕಾರಿ ವೆಚ್ಚದಲ್ಲಿ ರಕ್ಷಣೆಯನ್ನು ನೀಡುತ್ತಿರುವುದು ದುರಂತವಾಗಿದೆ ಹಾಗೂ ಈ ಸುಳ್ಳು ಸುದ್ದಿಯನ್ನು ಆಧರಿಸಿ ಮುಸ್ಲಿಂ ಯುವಕರನ್ನು ಬೇಟೆಯಾಡುತ್ತಿರುವುದನ್ನು ಎಸ್ಡಿಪಿಐ ಪಕ್ಷವು ಖಂಡಿಸುತ್ತದೆ ಎಂದು ತಿಳಿಸಿದೆ.

ಪೊಲೀಸ್ ಇಲಾಖೆ ಈ ಸುದ್ದಿಯ ನೈಜತೆಯ ಬಗ್ಗೆ ವಿಶೇಷ ತನಿಖೆ ನಡೆಸಿ ಇದರ ಹಿಂದಿರುವ ಷಡ್ಯಂತ್ರವನ್ನು ಬಹಿರಂಗ ಪಡಿಸುವುದರ ಮೂಲಕ ಸತ್ಯವನ್ನು ಜನರ ಮುಂದೆ ಬಯಲುಗೊಳಿಸಿ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯವನ್ನು ಕಾಣಲು ಪೋಲೀಸ್ ಇಲಾಖೆಯು ಶ್ರಮಿಸಬೇಕು ಅದೇ ರೀತಿ ಜನಸಾಮಾನ್ಯರು ಈ ಸುಳ್ಳು ಸುದ್ದಿಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಜಿಲ್ಲೆಯಲ್ಲಿ ಶಾಂತಿಯನ್ನು ಕಾಪಾಡಬೇಕೆಂದು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಯವರು ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿರುತ್ತಾರೆ.

Facebook Comments

comments