Connect with us

DAKSHINA KANNADA

ಉರ್ವಾ ಸ್ಟೋರ್ ಮೂಡಾ ಕಚೇರಿ ಬಳಿ ಸುಸಜ್ಜಿತ ಗ್ರಂಥಾಲಯಕ್ಕೆ ಶಾಸಕ ಕಾಮತ್‌ ಶಿಲಾನ್ಯಾಸ

ಮಂಗಳೂರು ಫೆಬ್ರವರಿ 27 : ಮಹಾನಗರ ಪಾಲಿಕೆಯ ದೇರೆಬೈಲ್ ನೈಋತ್ಯ 26 ನೇ ವಾರ್ಡಿನ ಉರ್ವಾ ಸ್ಟೋರ್ ಮೂಡಾ ಕಚೇರಿ ಬಳಿಯಲ್ಲಿ ನೂತನ ಗ್ರಂಥಾಲಯಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ರವರು ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸ್ಮಾರ್ಟ್‌ ಫೋನ್‌ ಮತ್ತು ಇಂಟರ್ನೆಟ್‌ ಯುಗದಲ್ಲಿ ಓದಲು ಸಾಕಷ್ಟು ಬೇರೆ ಬೇರೆ ಮೂಲಗಳು ಲಭ್ಯವಿದ್ದರೂ ಗ್ರಂಥಾಲಯದಲ್ಲಿ ಕುಳಿತು ಪುಸ್ತಕಗಳನ್ನು ಓದುವ ಅನುಭವವೇ ಬೇರೆ. ಹೀಗಾಗಿ ಮೂಡಾ ಕಚೇರಿ ಮತ್ತು ಇಂದಿರಾ ಕ್ಯಾಂಟೀನ್‌ ಮಧ್ಯದ ಜಾಗವನ್ನು ಗ್ರಂಥಾಲಯಕ್ಕೆ ಮೀಸಲಿಟ್ಟಿದ್ದು, ಈ ಜಾಗದಲ್ಲಿ ನೂತನ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ 15 ಲಕ್ಷ ರೂ.ಗಳ ಅನುದಾನವನ್ನು ಈಗಾಗಲೇ ಗ್ರಂಥಾಲಯ ಇಲಾಖೆ ವತಿಯಿಂದ ಬಿಡುಗಡೆ ಮಾಡಲಾಗಿದೆ. ಇನ್ನೂ 15 ಲಕ್ಷ ರೂ.ಗಳ ಅನುದಾನವನ್ನು ಮಹಾನಗರಪಾಲಿಕೆ ವತಿಯಿಂದ ಬಿಡುಗಡೆ ಮಾಡಿದರೆ ಉತ್ತಮ ಗ್ರಂಥಾಲಯ ಕಟ್ಟಡದ ಜತೆಗೆ ಉತ್ತಮ ಪುಸ್ತಕಗಳನ್ನೂ ಇಲ್ಲಿ ಜೋಡಿಸಬಹುದು ಎಂದು ಹೇಳಿದರು.

ಮನಪಾ ಮೇಯರ್ ಜಯಾನಂದ ಅಂಚನ್ ಅವರು ಪಾಲಿಕೆ ವತಿಯಿಂದ ಅನುದಾನ ಕೊಡಿಸಲು ಪ್ರಯತ್ನಿಸಬೇಕು ಎಂದು ಶಾಸಕರು ಮನವಿ ಮಾಡಿದರು. ಸುಬ್ರಹ್ಮಣ್ಯ ನಗರ ವ್ಯಾಪ್ತಿಯ ಹಲವಾರು ನಾಗರಿಕರು ಬಹಳಷ್ಟು ಬಾರಿ ಇಲ್ಲಿ ಗ್ರಂಥಾಲಯ ಆಗಬೇಕು ಎಂಬ ಬೇಡಿಕೆ ಇಟ್ಟಿದ್ದರು. ಅದನ್ನು ಈಡೇರಿಸಲು ಈಗ ಕಾಲ ಕೂಡಿಬಂದಿದೆ ಎಂದು ವೇದವ್ಯಾಸ ಕಾಮತ್‌ ನುಡಿದರು. ಮನಪಾದಿಂದಲೂ ಬೇಗನೆ ಅನುದಾನ ಬಿಡುಗಡೆ ಆದಲ್ಲಿ ಸುಸಜ್ಜಿತ ಗ್ರಂಥಾಲಯ ಇಲ್ಲಿ ತಲೆ ಎತ್ತಬಹುದು. ಅನುದಾನವು ಒಂದು ವರ್ಷದೊಳಗೆ ಬಳಕೆಯಾಗದಿದ್ದರೆ ಸರಕಾರಕ್ಕೆ ವಾಪಸ್ ಹೋಗುತ್ತದೆ. ಹಾಗಾಗದಂತೆ ಸಮರ್ಪಕವಾಗಿ ಬಳಸಿಕೊಂಡು ಗ್ರಂಥಾಲಯ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

 

Advertisement
Click to comment

You must be logged in to post a comment Login

Leave a Reply