ಮಂಗಳೂರು, ಫೆಬ್ರವರಿ 7: ಚಿರತೆಯೊಂದು ಮನೆಯ ಅಂಗಳದಲ್ಲಿದ್ದ ನಾಯಿಯನ್ನು ಎಳೆದುಕೊಂಡು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮದ ಕೊಂಡಾಳು ಪ್ರದೇಶದಲ್ಲಿ ನಡೆದಿದೆ.


ನಾರಾಯಣ ಗೌಡ ಎಂಬವರ ಮನೆಯ ಹೊರ ಜಗುಲಿಯಲ್ಲಿ ಮಲಗಿದ್ದ ನಾಯಿಯನ್ನು ರಾತ್ರಿ ವೇಳೆ ಚಿರತೆ ಹೊಂಚು ಹಾಕಿ ಕಚ್ಚಿ ಎಳೆದೊಯ್ದಿದೆ. ಚಿರತೆ ಮನೆಯಂಗಳಕ್ಕೆ ನುಗ್ಗಿದ ವೇಳೆ ಅಲ್ಲೇ ಮಲಗಿದ್ದ ಬೆಕ್ಕು ಅದೃಷ್ಟವಶಾತ್ ಚಿರತೆಯ ಬಾಯಿಂದ ತಪ್ಪಿಸಿಕೊಂಡಿದೆ. ನಾಯಿಯನ್ನು ಹೊತ್ತೊಯ್ದ ದೃಶ್ಯ ಮನೆಯ ಮುಂಭಾಗ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಈ ಘಟನೆ ಬಳಿಕ ದಿಡುಪೆ ಗ್ರಾಮಸ್ಥರಲ್ಲಿ ಭೀತಿ ಮನೆ ಮಾಡಿದ್ದು, ರಾತ್ರಿ ವೇಳೆ ಮನೆ ಹೊರಗೆ ಹೋಗಲು ಜನರು ಹೆದರುತ್ತಿದ್ದಾರೆ. ಈ ಹಿಂದೆ ಸಹ ದಿಡುಪೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳನ್ನು ಚಿರತೆ ಹೊತ್ತೊಯ್ದ ಘಟನೆಗಳು ನಡೆದಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಚಿರತೆಯ ಸಂಚರಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು ಪ್ರಾಣಿಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

Share Information