ನವದೆಹಲಿ, ಜನವರಿ 5: ಕಾರ್ಪೊರೇಟ್, ಅಪರಾಧ, ಕುಟುಂಬ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಕಾನೂನು ವ್ಯಾಜ್ಯಗಳಿದ್ದಲ್ಲಿ ವಾಟ್ಸಾಪ್ನಲ್ಲಿ ಉಚಿತವಾಗಿ ತಜ್ಞರ ಸಲಹೆ ಪಡೆಯಬಹುದು. ಇಂಥದ್ದೊಂದು ಸೇವೆಯನ್ನು ಸರ್ಕಾರವೇ ಆರಂಭಿಸಿದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ವಾಟ್ಸಾಪ್ನಲ್ಲಿ ನ್ಯಾಯ ಸೇತು ಎನ್ನುವ ಕಾನೂನು ಸೇವೆಯನ್ನು 2026ರ ಜನವರಿ 1ರಂದು ಆರಂಭಿಸಿದೆ. ಯಾರು ಬೇಕಾದರೂ ಇದರಿಂದ ಕಾನೂನು ಸಲಹೆಗಳನ್ನು ಪಡೆದುಕೊಳ್ಳಲು ಸಾಧ್ಯ.
ವಾಟ್ಸಾಪ್ನಲ್ಲಿ ಲಭ್ಯ ಇರುವ ನ್ಯಾಯಸೇತು ಸೇವೆಯಲ್ಲಿ ಕಾನೂನು ಸಲಹೆ, ನೆರವು ಮತ್ತು ಸಮಾಲೋಚನೆಗಳನ್ನು ಪಡೆಯಬಹುದು. ಯಾವುದಾದರೂ ವ್ಯಾಜ್ಯ ಇದ್ದಲ್ಲಿ ಅದಕ್ಕೆ ಸಂಬಂಧಿಸಿದ ಕಾನೂನುಗಳು ಏನಿವೆ ಎಂಬ ಮಾಹಿತಿ ತಿಳಿಯಬಹುದು. ಅಥವಾ, ಆ ವ್ಯಾಜ್ಯದಲ್ಲಿ ನಿಮಗೆ ಯಾವ್ಯಾವ ಕಾನೂನು ಅವಕಾಶಗಳು, ಮಾರ್ಗಗಳು ಇವೆ ಎನ್ನುವ ಸಮಾಲೋಚನೆಗಳನ್ನು ಪಡೆಯಬಹುದು.
ಕಾನೂನು ಸಲಹೆ ಹೇಗೆ ಲಭ್ಯ ?
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಟ್ವೀಟ್ ಮಾಡಿದ್ದು, 7217711814 ವಾಟ್ಸಾಪ್ ನಂಬರ್ ಕೊಟ್ಟಿದೆ. ಯಾರು ಬೇಕಾದರೂ ಈ ನಂಬರ್ ಅನ್ನು ಸೇವ್ ಮಾಡಿಕೊಳ್ಳಬಹುದು. ಅಥವಾ ಆ ನಂಬರ್ಗೆ ಹೈ ಮೆಸೇಜ್ ಕಳುಹಿಸಿದರೂ ಸಾಕು. ಟೆಲಿ-ಲಾ (Tele-Law) ಹೆಸರಿನಲ್ಲಿ ಸ್ವಯಂ ಆಗಿ ಸೇವ್ ಆಗುತ್ತದೆ.
ಮೂಲತಃ ಇದು ಒಂದು ಚಾಟ್ಬೋಟ್ ಆಗಿರುತ್ತದೆ. ನಿಮಗೆ ಮೂಲ ಕಾನೂನು ಸಲಹೆಗಳನ್ನು ಮತ್ತು ಮಾರ್ಗದರ್ಶನವನ್ನು ಇದು ಒದಗಿಸುತ್ತದೆ. ವರದಕ್ಷಿಣ ಕಿರುಕುಳ ಇತ್ಯಾದಿ ಕೌಟುಂಬಿಕ ಸಮಸ್ಯೆ ಇದ್ದರೆ ಅದಕ್ಕೆ ಸಂಬಂಧಿಸಿದ ಕಾನೂನುಗಳು ಏನಿವೆ, ಯಾವ ಕ್ರಮವನ್ನು ತೆಗೆದುಕೊಳ್ಳಬಹುದು ಇತ್ಯಾದಿ ಸಲಹೆಯನ್ನು ಪಡೆಯಬಹುದು.
ಈ ಚಾಟ್ಬೋಟ್ ಕೇವಲ ಕಾನೂನು ಸಲಹೆ ಮತ್ತು ಮಾರ್ಗಗಳನ್ನು ತಿಳಿಸುತ್ತದೆ. ಅದರೆ, ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಇತ್ಯಾದಿ ಕೆಲಸಗಳಿಗೆ ವೃತ್ತಿಪರ ವಕೀಲರ ನೆರವನ್ನು ಪಡೆಯಲೇಬೇಕಾಗುತ್ತದೆ.



