ಕಾರವಾರ : ಮನೆಯ ಡೈನಿಂಗ್ ಟೇಬಲ್ ಅಡಿ ಹೊಕ್ಕಿದ್ದ ದೈತ್ಯ ಕಾಳಿಂಗ ಸರ್ಪದಿಂದ ವೃದ್ದ ದಂಪತಿಗಳು ಪವಾಡ ಸದೃಶ್ಯರಾಗಿ ಬಚಾವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಮೀಪದ ಮಿರ್ಜಾನ್ ನಲ್ಲಿ ನಡೆದಿದೆ. 
ಮಿರ್ಜಾನ್ ನ  ದೇವಿದಾಸ ಗುನಗಾ ಎಂಬವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಬೆಳಗ್ಗೆ ಎಂದಿನಂತೆ ವೃದ್ದ ದಂಪತಿ ಉಪಾಹಾರ ಸೇವಿಸಲು ಮನೆಯ ಡೈನಿಂಗ್ ಟೇಬಲ್‌ ನಲ್ಲಿ ಕುಳಿತಿದ್ದಾರೆ. ಆ ಸಂದರ್ಭದಲ್ಲಿ ಎಲ್ಲಿಂದಲೋ ಮನೆಯೊಳಗೆ ಹೊಕ್ಕ ಬೃಹತ್ ಕಾಳಿಂಗ ಸರ್ಪ ತೆವಳುತ್ತ ಬಂದು ಡೈನಿಂಗ್ ಟೇಬಲ್ ಬಂದು ಚಹಾ ಸೇವಿಸುತ್ತಿದ್ದ ದೇವಿದಾಸರ ಪತ್ನಿ ಕಾಲ ಬುಡದಲ್ಲಿ ಬಂದು ಕೂತಿದೆ. ಪತ್ನಿಯ ಕಾಲ ಬಳಿ ದೈತ್ಯ ಕಾಳಿಂಗ ಸರ್ಪ ಕೂತು ಬುಸುಗುಟ್ಟುವುದನ್ನು ಕಂಡು ದೇವಿದಾಸ ಅರೆಕ್ಷಣ ದಂಗಾಗಿದ್ದಾರೆ.

ಆದರೆ ವಿಚಲಿತರಾಗದೆ ಧೈರ್ಯ ಮಾಡಿ ಪತ್ನಿಯ ಪ್ರಾಣದ ರಕ್ಷಣೆಗೆ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟಿದ್ದಾರೆ. ಕಾಲಿಗೆ ಆಗಿರುವ ಸಮಸ್ಯೆಯಿಂದ ನಡೆದಾಡಲು ಕಷ್ಟಪಡುತ್ತಿರುವ ತಮ್ಮ ಪತ್ನಿಗೆ ಹಾವಿನ ಬಗ್ಗೆ ಹೇಳಿದರೆ ಆಕೆ ಹೆದರಬಹುದು ಅಥವಾ ತಪ್ಪಿಸಿಕೊಳ್ಳುವ ಬರದಲ್ಲಿ ಹಾವಿಗೆ ಮೆಟ್ಟಿ ಕಚ್ಚಿಸಿಕೊಳ್ಳಬಹುದು ಎಂದು ಒಂದು ಉಪಾಯ ಮಾಡಿದ್ದಾರೆ. ಏನೋ ನೆಪ ಹೇಳಿ ಪತ್ನಿಯನ್ನು ಮೆಲ್ಲಗೆ ಏಳಿಸಿ ಡೈನಿಂಗ್ ಹಾಲ್‌ನಿಂದ ಮನೆಯ ಹೊರಗಡೆ ಕರೆದುಕೊಂಡು ಬಂದು ಕಾಳಿಂಗ ಸರ್ಪವನ್ನು ಅಡುಗೆ ಮನೆಯಲ್ಲೇ ಕೂಡಿ ಹಾಕಿದ್ದಾರೆ. ನಂತರ ಪತ್ನಿಗೆ ವಿಷಯ ತಿಳಿಸಿ, ಸ್ನೇಹಿತನ ಮೂಲಕ ಉರಗ ತಜ್ಞರಿಗೆ ಕರೆ ಮಾಡಿಸಿ ರಕ್ಷಿಸಲು ಮನವಿ ಮಾಡಿದ್ದಾರೆ.

ಮಾಹಿತಿ ಪಡೆದು ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ, ಪ್ರಾಣಿ ತಜ್ಞ, ಸ್ನೇಕ್ ಪವನ್ ಸತತ ಒಂದು ಗಂಟೆಯ ಕಾರ್ಯಾಚರಣೆ ನಡೆಸಿ ಡೈನಿಂಗ್ ಅಡಿಯಲ್ಲಿ ಕೂತಿದ್ದ ಬರೋಬ್ಬರಿ 14 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಹಿಡಿದು ಸಂರಕ್ಷಿಸಿ ದೂರದ ಕಾಡಿಗೆ ಬಿಟ್ಟಿದ್ದಾರೆ. ದೇವಿದಾಸನ ಸಮಯ ಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share Information