ಮಂಗಳೂರು ಸೆಪ್ಟೆಂಬರ್ 24: ಖಾಸಗಿ ವ್ಯಕ್ತಿಯ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿ ಬಳಿಕ ಆತನಿಗೆ ಪರಿಹಾರ ನೀಡದೇ ಸತಾಯಿಸಿದ ಅಧಿಕಾರಿಗಳಿಗೆ ಜಮೀನಿನ ಮಾಲೀಕ ಸರಿಯಾಗೇ ಬುದ್ದಿ ಕಲಿಸಿದ್ದಾನೆ. ಕೋರ್ಟ್ ಆದೇಶ ತೆಗೆದುಕೊಂಡು ಬಂದ ಜಮೀನಿನ ಮಾಲೀಕ ಪ್ರಮುಖ ರಸ್ತೆಗೆ ಬೇಲಿ ಹಾಕಲು ಹೋದ ಘಟನೆ ಬುಧವಾರ ಬಜ್ಪೆಯ ಮಂಜನಕಟ್ಟೆಯಲ್ಲಿ ನಡೆದಿದೆ.

ವಿದೇಶದಲ್ಲಿರುವ ಮಂಜನಕಟ್ಟೆಯ ನಿವಾಸಿ ಸಿಸಿಲಿಯಾ ಅವರಿಗೆ ಸೇರಿದ ಜಾಗದಲ್ಲಿ 2008 ರಲ್ಲಿ ಲೋಕೋಪಯೋಗಿ ಇಲಾಖೆಯ ಅವರ ಒಪ್ಪಿಗೆಯಿಲ್ಲದೆ ಜಮೀನನ್ನು ಸ್ವಾಧೀನ ಮಾಡಿಕೊಂಡು ಕಿನ್ನಿಗೋಳಿ- ನಿಡ್ಡೋಡಿ- ಗಂಜಿಮಠ – ಮಂಗಳೂರು ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿತ್ತು. ಸಿಸಿಲಿಯಾ ಅವರು 2014ರಲ್ಲಿ ತಹಶೀಲ್ದಾರ್ ಮತ್ತು ಪಿಡ್ಲ್ಯೂಡಿ ಇಲಾಖೆಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ವಾದ ಆಲಿಸಿದ ನ್ಯಾಯಾಲಯ ಸಿಸಿಲಿಯಾ ಅವರ ಹತ್ತು ಸೆಂಟ್ ನಿವೇಶನಕ್ಕೆ ಸಮನಾಗಿರುವ ಬೇರೊಂದು ಜಾಗ ನೀಡಬೇಕು ಅಥವಾ ರಸ್ತೆ ತೆರವು ಮಾಡಿ ಅವರ ಸ್ವಂತ ನಿವೇಶನ ಬಿಟ್ಟು ಕೊಡಬೇಕೆಂದು 2017ರಲ್ಲಿ ತೀರ್ಪು ನೀಡಿತ್ತು.

ಆದರೆ ಅಧಿಕಾರಿಗಳು ಮಾತ್ರ ಯಾವುದೇ ಪರಿಹಾರ ನೀಡದೇ ಅವರನ್ನು ಕಚೇರಿಗೆ ಆಲೆದಾಡಿಸಿದ್ದಾರೆ. ಇದೀಗ ನ್ಯಾಯಾಲಯದ ಆದೇಶ ಪಡೆದುಕೊಂಡು ಬಂದ ಸಿಸಿಲಿಯಾ ಅವರ ಅಳಿಯ ಆಂಡ್ರಿ ಡಿ ಅಲ್ಮೇಡಾ ತಮ್ಮ ಜಾಗವನ್ನು ಗುರುತಿಸಿ ಬೇಲಿ ಹಾಕಲು ಮುಂದಾಗಿದ್ದರು. ನ್ಯಾಯಾಲಯದ ಅಮೀನರಾದ ಶಿವರಾಮ ರೈ ಮತ್ತು ದೀಪಕ್ ಅವರ ಸಮ್ಮುಖದಲ್ಲಿ ತಮ್ಮ ನಿವೇಶನದ ಗಡಿ ಗುರುತಿಸಿ ರಸ್ತೆ ಅಗೆಯುವ ಕಾರ್ಯಕ್ಕೆ ಮುಂದಾಗಿದ್ದರು. ರಸ್ತೆ ಕಾಮಗಾರಿ ಆರಂಭವಾಗುತ್ತಿದ್ದಂತೆ, ಜನನಿಬಿಡ ಕಿನ್ನಿಗೋಳಿ-ನಿಡ್ಡೋಡಿ-ಗಂಜಿಮಠ-ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಿಕ್ಕಿಹಾಕಿಕೊಂಡದ್ದವು. ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ನಿರೀಕ್ಷಕ ಪೂರ್ಣಚಂದ್ರ ಮತ್ತು ಉಪ ತಹಶೀಲ್ದಾರ್ ಸ್ಟೀಫನ್ ಸ್ಥಳಕ್ಕೆ ಧಾವಿಸಿ ಭೂಮಾಲೀಕರ ಕುಟುಂಬ ಮತ್ತು ನ್ಯಾಯಾಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು , ಬಳಿಕ ಜಿಲ್ಲಾಧಿಕಾರಿ ಕಚೇರಿ ಮಧ್ಯಪ್ರವೇಶಿಸಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಹೇಮಂತ್ ಅವರು ಸಂತ್ರಸ್ತ ಕುಟುಂಬ, ಅವರ ವಕೀಲ ಪ್ರದೀಪ್ ಡಿಸೋಜಾ ಮತ್ತು ನ್ಯಾಯಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಕಕ್ಷಿದಾರರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆದೊಯ್ಯಲಾಯಿತು, ಅಲ್ಲಿ ಸಂಜೆಯೊಳಗೆ ವಿಷಯ ಇತ್ಯರ್ಥಪಡಿಸುವುದಾಗಿ ಹೇಮಂತ್ ಭರವಸೆ ನೀಡಿದರು. ಅವರ ಕೋರಿಕೆಯ ಮೇರೆಗೆ, ವಾಹನ ಸಂಚಾರವನ್ನು ನಂತರ ಪುನಃಸ್ಥಾಪಿಸಲಾಯಿತು.



