LATEST NEWS
ಸುಜ್ಲಾನ್ ವಿರುದ್ದ ಕಾರ್ಮಿಕರ ಪ್ರತಿಭಟನೆ
ಸುಜ್ಲಾನ್ ವಿರುದ್ದ ಕಾರ್ಮಿಕರ ಪ್ರತಿಭಟನೆ
ಉಡುಪಿ ನವೆಂಬರ್ 07: ಗುತ್ತಿಗೆ ಆಧಾರಿತ ಕಾರ್ಮಿಕರನ್ನು ಏಕಾಏಕಿ ವಜಾ ಮಾಡಿರುವುದನ್ನು ಖಂಡಿಸಿ ಸುಜ್ಲಾನ್ ಕಂಪೆನಿ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಪಡುಬಿದ್ರಿಯ ನಂದಿಕೂರಿನಲ್ಲಿರುವ ಗಾಳಿಯಂತ್ರ ರೆಕ್ಕೆಯ ಉತ್ಪಾದನಾ ಸುಜ್ಲಾನ್ ಕಂಪೆನಿ ವಿರುದ್ಧ ಕಳೆದ ಎರಡು ದಿನಗಳಿಂದ ನೂರಕ್ಕೂ ಅಧಿಕ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸುಜ್ಲಾನ್ ಕಂಪೆನಿ ಗುತ್ತಿಗೆ ಆಧಾರಿತ ಕಾರ್ಮಿಕರನ್ನು ಏಕಾ ಏಕಿ ವಜಾ ಮಾಡಿರುವ ಹಿನ್ನಲೆಯಲ್ಲಿ ಕಾರ್ಮಿಕರಿಗೆ ಮೂರು ತಿಂಗಳ ಮುಂಗಡ ಸಂಬಳ ನೀಡಬೇಕೆಂದು ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಕರವೇ ಕಾರ್ಯಕರ್ತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಕಾರ್ಮಿಕರಿಗೆ ಮೂರು ತಿಂಗಳ ಸಂಬಳ ನೀಡಲು ಕಂಪೆನಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದು ಪ್ರತಿಭಟನಾಕಾರರು ಕಂಪೆನಿಯ ಮುಖ್ಯದ್ವಾರದ ಮುಂಭಾಗ ಟಯರ್ ಗೆ ಬೆಂಕಿ ಹೊತ್ತಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಂಪೆನಿ ಮುಚ್ಚುವ ಹಂತಕ್ಕೆ ಬಂದ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ತೆಗೆದು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಬಿಗಿಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರು ಹಾಗೂ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ.
You must be logged in to post a comment Login