ಕುಂದಾಪುರ ಎಪ್ರಿಲ್ 04: ತಲ್ಲೂರು ಗ್ರಾಮದ ಕೋಟೆಬಾಗಿಲು ನಿವಾಸಿ ಶಶಿಕಲಾ (20) ಎಂಬ ಯುವತಿ ಶನಿವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮನೆಯ ಸಮೀಪದ ಬಾವಿಯಲ್ಲಿ ಅವರ ಮೃತದೇಹ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಶಶಿಕಲಾ, ಎಪ್ರಿಲ್ 3ರಂದು ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿದ್ದರು. ಸಂಜೆ 7 ಗಂಟೆಯ ಸುಮಾರಿಗೆ ಮನೆಯಿಂದ ಹೊರಹೋದವರು ವಾಪಸ್ ಬಾರದೇ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ರಾತ್ರಿ 9:20ರ ಸುಮಾರಿಗೆ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಕನಕಮ್ಮ ಶೆಡ್ತಿ ಎಂಬುವವರ ಜಾಗದ ಹೊಸ ಬಾವಿಯಲ್ಲಿ ಶಶಿಕಲಾ ಅವರ ಮೃತದೇಹ ಪತ್ತೆಯಾಗಿದೆ.
ಮೃತ ಶಶಿಕಲಾ ಅವರು ಕಳೆದ ಒಂದು ವರ್ಷದಿಂದ ಮಂಜುನಾಥ ಎಂಬುವವರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಈ ವಿಚಾರ ಮನೆಯವರಿಗೂ ತಿಳಿದಿತ್ತು. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಕುಂದಾಪುರ ಪೊಲೀಸರು ಯುಡಿಆರ್ ಕ್ರಮಾಂಕ 11/2026, ಕಲಂ 194 (3)(iv) BNSS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.