ಕುಂದಾಪುರ ನವೆಂಬರ್ 20: ಮಂದಾರ್ತಿ 2ನೇ ಮೇಳದ ಕಲಾವಿದ ಶ್ರೀ ಈಶ್ವರ ಗೌಡ ನಿನ್ನೆ ರಾತ್ರಿ ಮಹಿಷಾಸುರ ಪಾತ್ರ ಕೊನೆಯಾಗುತ್ತಿದ್ದಂತೆ ಸಂಪೂರ್ಣ ವೇಷ ಕಳಚುವ ಮುನ್ನ ಹೃದಯಾಘಾತದಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನಪ್ಪಿದ್ದಾರೆ.

ಬುಧವಾರ( ನ19) ಮಧ್ಯ ರಾತ್ರಿ ಕುಂದಾಪುರದ ಸೌಡ ಸಮೀಪ ಈ ಘಟನೆ ನಡೆದಿದೆ. ಮಂದಾರ್ತಿ 2ನೇ ಮೇಳದ ಪ್ರತಿಭಾನ್ವಿತ ಕಲಾವಿದರಾಗಿದ್ದ ಇವರು ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿಯಾಗಿದ್ದರು. ದೇವಿ ಮಾಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರ ಪಾತ್ರ ಕೊನೆಯಾಗುತ್ತಿದ್ದಂತೆ ಸಂಪೂರ್ಣ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ಕುಸಿದಿದ್ದಾರೆ. ಸಹಕಲಾವಿದರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಇಹಲೋಕ ತ್ಯಜಿಸಿದ್ದರು. ಈಶ್ವರ ಗೌಡ ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.



