ಕೋಟ ಜನವರಿ 06: ಸಂಬಂಧಿಕರ ಸ್ಕೂಟಿಗೆ ಹಾನಿ ಮಾಡಿದಕ್ಕೆ ಮನೆಯವರು ಬೈಯುತ್ತಾರೆ ಎಂದು ಭಯಗೊಂಡ ವಿಧ್ಯಾರ್ಥಿಯೊಬ್ಬ ಮನೆಯ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾೖಬ್ರಕಟ್ಟೆ ಸಮೀಪ ಕಳ್ಳಾಡಿಯಲ್ಲಿ ರವಿವಾರ ಸಂಭವಿಸಿದೆ.

ಮೃತರನ್ನು ಮಂದಾರ್ತಿಯಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಉದ್ಯೋಗಿ ಮಂಜುನಾಥ ಶೆಟ್ಟಿಗಾರ್ ಅವರ ಪುತ್ರ, ಪ್ರಥಮ ಪಿಯುಸಿ ವಿದ್ಯಾರ್ಥಿ ವಂಶಿಕ (17) ಎಂದು ಗುರುತಿಸಲಾಗಿದೆ.
ರವಿವಾರ ಬೆಳಗ್ಗೆ ಕಾರ್ಕಳದಲ್ಲಿ ವಂಶಿಕಾ ಅವರ ತಂದೆಯ ಸಂಬಂಧಿಯೋರ್ವರ ಮನೆಯಲ್ಲಿ ಕಾರ್ಯಕ್ರಮವಿತ್ತು. ಹೀಗಾಗಿ ಆತನ ಸಂಬಂಧಿಯೋರ್ವರು ಸಾೖಬ್ರಕಟ್ಟೆಯಲ್ಲಿರುವ ಈತನ ಮನೆಗೆ ಬಂದು ಅಲ್ಲಿ ಸ್ಕೂಟಿ ನಿಲ್ಲಿಸಿ ಮಂಜುನಾಥ ಶೆಟ್ಟಿಗಾರ್ ಕುಟುಂಬದವರೊಂದಿಗೆ ಕಾರ್ಕಳಕ್ಕೆ ತೆರಳಿದ್ದರು. ಆಗ ವಂಶಿಕನ ತಾತ ಮನೆಯಲ್ಲಿದ್ದರು. ಈ ಸಂದರ್ಭ ಸಂಬಂಧಿಕರು ತಂದಿಟ್ಟಿದ್ದ ಸ್ಕೂಟಿಯನ್ನು ಕಲಿಯುವ ಸಲುವಾಗಿ ಕೊಂಡೊಯ್ದಿದ್ದು ಸ್ಕೂಟಿ ನಿಯಂತ್ರಣ ತಪ್ಪಿ ಬಿದ್ದು ಹಾನಿಯಾಗಿತ್ತು. ಈ ವಿಚಾರ ಮನೆಯವರಿಗೆ ತಿಳಿದರೆ ಬೈಯುತ್ತಾರೆ ಎಂದು ಹೆದರಿ ಮನೆಯ ಹತ್ತಿರ ಇದ್ದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಯವರು ಕಾರ್ಯಕ್ರಮ ಮುಗಿಸಿ ವಾಪಸಾದಾಗ ಸ್ಕೂಟಿಯೊಂದಿಗೆ ತೆರಳಿದ ಮಗ ಅಪರಾಹ್ನವಾದರೂ ಮನೆಗೆ ವಾಪಸಾಗದಿರುವುದನ್ನು ಗಮನಿಸಿ ಸ್ನೇಹಿತರು ಹಾಗೂ ಅಕ್ಕಪಕ್ಕದ ಮನೆಯವರೊಂದಿಗೆ ಸ್ಥಳೀಯ ಪರಿಸರದಲ್ಲಿ ಹುಡುಕಾಟ ನಡೆಸಿದಾಗ ಸ್ಕೂಟಿ ಹಾಗೂ ಮೊಬೈಲ್, ಹೆಲ್ಮೆಟ್ ಪತ್ತೆಯಾಗಿತ್ತು. ಅನಂತರ ಮನೆಯ ಸಮೀಪದಲ್ಲೇಇದ್ದ ಕೃಷಿ ಹೊಂಡದ ಬಳಿ ಆತನ ಚಪ್ಪಲಿ ಹಾಗೂ ಶರ್ಟ್ ಪತ್ತೆಯಾಗಿದೆ. ಹೊಂಡವನ್ನು ಪರಿಶೀಲಿಸಿದಾಗ ಮೃತದೇಹ ಪತ್ತೆಯಾಯಿತು. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



