ದೇವಸ್ಥಾನದ ಹಣದಲ್ಲಿ ಕಾರು ಖರೀದಿಸಿ ಬೆಂಗಳೂರಿಗೆ ಡೆಲಿವರಿ

ಮಂಗಳೂರು ಫೆಬ್ರವರಿ 10:ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಳಕೆಯಾಗಬೇಕಿದ್ದ ಹೊಸ ಕಾರು ಮತ್ತೆ ಬೆಂಗಳೂರಿಗೆ ತಲುಪಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹಣದಲ್ಲಿ ಬುಕ್ಕಿಂಗ್ ಆಗಿದ್ದ ಹೊಸ ಇನ್ನೋವಾ ಕಾರನ್ನು ಇಂದು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಸುಮಾರು 26 ಲಕ್ಷ ರೂಪಾಯಿಯ ಈ ಕಾರನ್ನು ಕ್ಷೇತ್ರದ ಉಪಯೋಗಕ್ಕೆ ಬಳಸುವ ಬದಲು ನೇರವಾಗಿ ಬೆಂಗಳೂರಿನ ಧಾರ್ಮಿಕ ಧತ್ತಿ ಇಲಾಖೆಯ ಆಯುಕ್ತರ ಕಛೇರಿಗೆ ಕಳುಹಿಸಲಾಗಿದೆ.

ಮಂಗಳೂರಿನ ಟೊಯೋಟಾ ಶೋರೂಂ ನಿಂದ ನೇರವಾಗಿ ಕಾರನ್ನು ಬೆಂಗಳೂರಿಗೆ ಕೊಂಡೊಯ್ಯಲಾಗಿದೆ. ರಾಜ್ಯದ ಅತೀ ಶ್ರೀಮಂತ ದೇವಸ್ಥಾನವೆಂದು ಗುರುತಿಸಿಕೊಂಡಿರುವ ಈ ಕ್ಷೇತ್ರಕ್ಕೆ ಭೇಟಿ ನೀಡುವ ವಿವಿಐಪಿ ಗಳನ್ನು ಕ್ಷೇತ್ರಕ್ಕೆ ಕರೆ ತರುವುದು, ಬಿಡುವ ಕಾರ್ಯಕ್ಕಾಗಿ ದೇವಸ್ಥಾನದಲ್ಲಿ ಕಾರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಹಿಂದೆಯೂ ದೇವಸ್ಥಾನಕ್ಕೆ ಹೊಸ ಇನ್ನೊವಾ ಕಾರನ್ನು ಖರೀದಿಸಲಾಗಿತ್ತು. ಆ ಕಾರನ್ನು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಆಯುಕ್ತರ ಕಛೇರಿಗೆ ತರಿಸಿಕೊಳ್ಳಲಾಗಿತ್ತು.

ಇದೀಗ ಮತ್ತೆ ಹೊಸದಾಗಿ ಖರೀದಿಸಿದ ಕಾರನ್ನೂ ಆಯುಕ್ತರ ಕಛೇರಿಗೆ ಸಾಗಿಸಲಾಗಿದೆ. ದೇವಸ್ಥಾನದ ಹಣವನ್ನು ದೇವಸ್ಥಾನಕ್ಕೆ ಬಳಸಬೇಕೆಂಬ ಒತ್ತಾಯಗಳು ಹೆಚ್ಚುತ್ತಿರುವ ನಡುವೆಯೇ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹಣವನ್ನು ಇತರೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬರಲಾರಂಭಿಸಿದೆ. ಹೊಸ ಕಾರನ್ನು ಕ್ಷೇತ್ರದಲ್ಲೇ ಉಳಿಸಿಕೊಳ್ಳಬೇಕು ಎನ್ನುವ ಒತ್ತಾಯವೂ ಸ್ಥಳೀಯರಿಂದ ವ್ಯಕ್ತವಾಗಿದೆ.

Facebook Comments

comments