ಪುತ್ತೂರು ಡಿಸೆಂಬರ್ 20: ದೇಶದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕಿರುಷಷ್ಠಿ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂಯೇತರರ ಹೆಸರು ನಮೂದಿಸಿರುವುದಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. ಪ್ರೋಟೋಕಾಲ್ ಹೆಸರಿನಲ್ಲಿ ಹಿಂದೂ ದೇವಸ್ಥಾನಗಳಲ್ಲಿ ಅನ್ಯಧರ್ಮಿಯರ ಹೆಸರು ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿಸೆಂಬರ್ 22 ರಿಂದ 26 ರ ತನಕ ನಡೆಯಲಿರುವ ಕಿರುಷಷ್ಠಿ ಉತ್ಸವ ನಡೆಯಲಿದೆ. ಈ ಹಿನ್ನಲೆ ದೇವಸ್ಥಾನದ ಆಡಳಿತ ಮಂಡಳಿ ಆಮಂತ್ರಣ ಪತ್ರಿಕೆಯಲ್ಲಿ ಪ್ರೋಟೋಕಾಲ್ ನಂತೆ ಅತಿಥಿಗಳ ಹೆಸರು ಹಾಕಿದ್ದು, ಅದರಲ್ಲಿ ಡಿಸೆಂಬರ್ 22 ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮವನ್ನು ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಅಲ್ಲದೆ ಆಮಂತ್ರಣ ಪತ್ರಿಕೆಯಲ್ಲಿ ಇತರ ಅಕಾಡಮಿಗಳ ಮತ್ತು ಸಮಿತಿಗಳ ಅಧ್ಯಕ್ಷರ ಹೆಸರಯ ಉಲ್ಲೇಖಿಸಲಾಗಿದ್ದು, ಅದರಲ್ಲಿ ಕೆಲವು ಹಿಂದೂಯೇತರರ ಹೆಸರು ಸೇರ್ಪಡೆಯಾಗಿದೆ.

ಇದು ಇದೀಗ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆಗೆ ವಿರುದ್ಧವಾಗಿ ದೇವಸ್ಥಾನದ ಆಡಳಿತ ಮಂಡಳಿ ನಡೆದುಕೊಳ್ಳುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಅನ್ಯಧರ್ಮೀಯರನ್ನು ದೇವಸ್ಥಾನದ ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ಹಿಂದುಗಳ ಭಾವನೆಗೆ ಧಕ್ಕೆ ತರಲಾಗಿದ್ದು, ಈ ಕೂಡಲೇ ಆಮಂತ್ರಣ ಪತ್ರಿಕೆಯನ್ನು ತಿದ್ದುಪಡಿ ಮಾಡಲು ಆಗ್ರಹಿಸಿದೆ.

ಈ ಹಿಂದೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಇದೇ ರೀತಿಯ ವಿವಾದ ನಡೆದಿತ್ತು, ಆಗ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಎ. ಬಿ.ಇಬ್ರಾಹಿಂ ಅರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿದ್ದಕ್ಕೆ ವಿರೋಧ ವ್ಯಕ್ತವಾಗಿದ್ದು, ಬಳಿಕ ತೀವ್ರ ವಿರೋಧ ಬಂದ ಹಿನ್ನಲೆಯಲ್ಲಿ ಆಮಂತ್ರಣ ಪತ್ರಿಕೆ ಮರು ಮುದ್ರಣ ಮಾಡಲಾಗಿತ್ತು. ಇದೀಗ ಕುಕ್ಕೆ ಸುಬ್ರಹ್ಮಣ್ಯ ದಲ್ಲೂ ಆಮಂತ್ರಣ ಪತ್ರಿಕೆ ವಿವಾದ ಆರಂಭವಾಗಿದೆ.



