ಕುಕ್ಕೆ ಸುಬ್ರಹ್ಮಣ್ಯ ಗಲಾಟೆ ಪ್ರಕರಣ ಚೈತ್ರಾ ಕುಂದಾಪುರಗೆ ನವೆಂಬರ್ 3 ವರೆಗೆ ನ್ಯಾಯಾಂಗ ಬಂಧನ

ಪುತ್ತೂರು ಅಕ್ಟೋಬರ್ 25: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಮಠದ ವಿಚಾರಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕು ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ನಾಯಕಿ ಚೈತ್ರಾ ಕುಂದಾಪುರ ಸೇರಿದಂತೆ ಆಕೆಯ ಐವರು ಸಹಚರರಿಗೆ ಸುಳ್ಯ ಜೆಎಂಎಫ್ ಎಸ್ಸಿ ನ್ಯಾಯಾಲಯ ನವೆಂಬರ್ 3 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಮಠದ ನಡುವಿನ ವಿವಾದ ಈಗ ಬೀದಿ ಕಾಳಗವಾಗಿ ಮಾರ್ಪಟ್ಟಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕು ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಹಾಗೂ ಹಿಂದೂ ನಾಯಕಿ ಚೈತ್ರಾ ಕುಂದಾಪುರ ನಡುವೆ ವೈಮನಸ್ಸಿಗೆ ಕಾರಣವಾಗಿತ್ತು. ಬುಧವಾರವೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆಯೂ ಫೋನಿನಲ್ಲೇ ಮಾತಿನ ಚಕಮಕಿಯೂ ನಡೆದಿತ್ತು. ಬಳಿಕ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂಡ ಸುಬ್ರಹ್ಮಣ್ಯ ದಲ್ಲಿರುವ ಗುರುಪ್ರಸಾದ್ ಪಂಜ ಅವರ ಅಂಗಡಿಯ ಬಳಿ ಸೇರಿ ಅವರಿಗೆ ಹಲ್ಲೆ ನಡೆಸಿದ್ದರು.

ಈ ನಡುವೆ ಹಲ್ಲೆಗೊಳಗಾದ ಗುರುಪ್ರಸಾದ್ ಪಂಜ ಹಾಗೂ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಚೈತ್ರಾ ಕುಂದಾಪುರ ಗುರುಪ್ರಸಾದ್ ಮೇಲೆ ಮಾನಭಂಗದ ದೂರು ‌ದಾಖಲಿಸಿದ್ದರೆ, ಗುರುಪ್ರಸಾದ್ ಪಂಜ ಚೈತ್ರಾ ಹಾಗೂ ಆಕೆಯ ಐವರು ಸಹಚರರ ವಿರುದ್ಧ ಕೊಲೆಯತ್ನ ದೂರು ದಾಖಲಿಸಿದ್ದರು.

ಈ ಹಿನ್ನಲೆಯಲ್ಲಿ ಚೈತ್ರಾ ಕುಂದಾಪುರ ಅವರ ಐವರು ಸಹಚರರನ್ನು ನಿನ್ನೆ ರಾತ್ರಿಯೇ ಬಂಧಿಸಿರುವ ಸುಬ್ರಹ್ಮಣ್ಯ ಪೋಲೀಸರು ಇಂದು ಬೆಳಿಗ್ಗೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚೈತ್ರಾ‌ ಅವರನ್ನು‌ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಗುರು‌ಪ್ರಸಾದ್ ನೀಡಿದ ದೂರಿನ ಹಿನ್ನಲೆಯಲ್ಲಿ ಚೈತ್ರಾ ಹಾಗೂ ಆಕೆಯ ಐವರು ಸಹಚರರನ್ನು ಪೋಲೀಸರು ಸುಳ್ಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ವಾದವನ್ನು ಆಲಿಸಿದ ನ್ಯಾಯಾಲಯ ಚೈತ್ರಾ‌ ಹಾಗೂ ಆಕೆಯ‌ ಐವರು ಸಹಚರರಿಗೆ ನವಂಬರ್ 3 ರ ವರೆಗೆ ನ್ಯಾಯಾಂಗ ಬಂಧನದ ಶಿಕ್ಷೆ ವಿಧಿಸಿದೆ.