ಮಂಗಳೂರು ಸೆಪ್ಟೆಂಬರ್ 15:ಸದಾ ಕೋಮು ವಿಚಾರಗಳಿಂದ ಸುದ್ದಿಯಾಗುತ್ತಿದ್ದ ಮಂಗಳೂರು ಇದೀಗ ಕೋಮುಸೌಹಾರ್ದತೆ ಕಡೆಗೆ ಹೆಜ್ಜೆ ಇಡುತ್ತಿದೆ. ಮಂಗಳೂರಿನ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ನಡೆದ “ಸಾರ್ವಜನಿಕ ಮಸೀದಿ ದರ್ಶನ” ಕಾರ್ಯಕ್ರಮವು ಸರ್ವಧರ್ಮೀಯರನ್ನು ಒಟ್ಟುಗೂಡಿಸಿ ಗಮನ ಸೆಳೆದಿದೆ.


ಇಸ್ಲಾಂ ಧರ್ಮದ ಆಚಾರ- ವಿಚಾರಗಳು ಮತ್ತು ಮಸೀದಿಗಳ ಕುರಿತಾಗಿ ಸಮಾಜದಲ್ಲಿರುವ ಅನುಮಾನ, ತಪ್ಪು ಕಲ್ಪನೆಗಳನ್ನು ದೂರ ಮಾಡಿ, ಸರ್ವ ಧರ್ಮೀಯರಿಗೂ ಮಸೀದಿಗೆ ಪ್ರವೇಶ ಒದಗಿಸಿ ಸರಿಯಾದ ಮಾಹಿತಿ ನೀಡುವ ‘ಸಾರ್ವಜನಿಕ ಮಸೀದಿ ದರ್ಶನ’ದ ಪ್ರಥಮ ಕಾರ್ಯಕ್ರಮ ಭಾನುವಾರ ಮಂಗಳೂರಿನಲ್ಲಿ ನಡೆಯಿತು.


ನಗರದ ಕುದ್ರೋಳಿ ಜಾಮಿಯಾ ಮಸೀದಿ ಭಾನುವಾರ ಬೆಳಗ್ಗಿನಿಂದ ಸಂಜೆವರೆಗೂ ಸರ್ವ ಧರ್ಮೀಯರಿಗೆ ಮುಕ್ತವಾಗಿತ್ತು. ನೂರಾರು ಮಂದಿ ಭೇಟಿ ನೀಡಿ ತಮ್ಮ ಪ್ರಶ್ನೆಗಳಿಗೆ ಸ್ವಯಂ ಸೇವಕರಿಂದ ಉತ್ತರ ಪಡೆದುಕೊಂಡರು. ಮಸೀದಿಯ ಪ್ರತಿಯೊಂದು ಸ್ಥಳಗಳಿಗೂ ಭೇಟಿ ನೀಡಿ ಸೆಲ್ಸಿ, ಫೋಟೋಗಳನ್ನು ಕ್ಲಿಕ್ಕಿಸಿದರು. ಪ್ರಾರ್ಥನೆಯ ರೀತಿ ನೀತಿಗಳನ್ನು ಸ್ವತಃ ನೋಡಿ ಅನುಭವ ಪಡೆದುಕೊಂಡರು.


ಜಮಾತೆ ಇಸ್ಲಾಮಿ ಹಿಂದ್ ಮಂಗಳೂರು, ಮುಸ್ಲಿಂ ಐಕ್ಯತಾ ವೇದಿಕೆ ಹಾಗೂ ಕುದ್ರೋಳಿ ಜಾಮಿಯಾ ಮಸೀದಿ ಆಡಳಿತ ಮಂಡಳಿ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.ಮಸೀದಿಗೆ ಆಗಮಿಸಿದ ಎಲ್ಲರಿಗೂ ಖರ್ಜೂರ, ಕಲ್ಲಂಗಡಿ ಜ್ಯೂಸ್, ಚಹಾ, ತಿಂಡಿ, ಮಧ್ಯಾಹ್ನ ಊಟ, ಇಸ್ಲಾಂಗೆ ಸಂಬಂಧಿಸಿದ ಪುಸ್ತಕಗಳ ಉಡುಗೊರೆ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ಮಸೀದಿಯಲ್ಲಿ ಸರ್ವರಿಗೂ ಎಲ್ಲ ಕಡೆಗೂ ಸಂಚರಿಸಲು ಮುಕ್ತ ಅವಕಾಶವಿತ್ತು. ಮಿಂಬರ್‌ (ಪ್ರವಚನದ ವೇದಿಕೆ) ಬಳಿಯೂ ನಿಂತು ಜನರು ಪೋಟೊ ಕ್ಲಿಕ್ಕಿಸುವುದು, ಸೆಲ್ಪಿ ತೆಗೆಯುವುದಕ್ಕೂ ಅವಕಾಶ ನೀಡಲಾಗಿತ್ತು.

Share Information