ವಿಟ್ಲ,ಮಾರ್ಚ್ 24: ಅಪಘಾತವೊಂದು ವಿಕೋಪಕ್ಕೆ ತಿರುಗಿ ಕೆಎಸ್ಆರ್ಟಿಸಿ ಬಸ್ ಸಿಬ್ಬಂದಿ ಹಾಗೂ ಟಿಪ್ಪರ್ ಚಾಲಕನ ನಡುವೆ ರಸ್ತೆಯಲ್ಲೇ ಕೈಕೈ ಮಿಲಾಯಿಸಿದ ಘಟನೆ ವಿಟ್ಲದ ಪೆರುವಾಯಿ ಸಮೀಪದ ಮುಳಿಯ ಎಂಬಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಇತ್ತಂಡದವರು ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪಕಳಕುಂಜದಿಂದ ವಿಟ್ಲಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಪೆರುವಾಯಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ನಡುವೆ ಮುಳಿಯ ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಎರಡೂ ವಾಹನಗಳ ಮುಂಭಾಗ ಜಖಂಗೊಂಡಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣ ವಾಹನಗಳಿಂದ ಕೆಳಗಿಳಿದ ಚಾಲಕರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಈ ವೇಳೆ ಆಕ್ರೋಶಗೊಂಡ ಟಿಪ್ಪರ್ ಚಾಲಕ ಬಿಲಾಲ್ ಎಂಬಾತ, ಕರ್ತವ್ಯದಲ್ಲಿದ್ದ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಪ್ರಶಾಂತ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ. ಇದಕ್ಕೆ ಪ್ರತಿಯಾಗಿ ಬಸ್ ಚಾಲಕ ಮತ್ತು ಕಂಡಕ್ಟರ್ ಕೂಡ ಟಿಪ್ಪರ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ಹಲ್ಲೆಗೊಳಗಾದ ಬಸ್ ಕಂಡಕ್ಟರ್ ಪ್ರಶಾಂತ್ ಅವರು ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಗಾಯಗೊಂಡ ಟಿಪ್ಪರ್ ಚಾಲಕ ಬಿಲಾಲ್ ಪುತ್ತೂರಿನ ಮೆಡ್ಲ್ಯಾಂಡ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.