ಸಿಎಂ ಹೇಳಿಕೆ ವಾಪಾಸು ಪಡೆದು ಕರಾವಳಿಗರ ಕ್ಷಮೆ ಕೇಳಬೇಕು – ಕೋಟ ಶ್ರೀನಿವಾಸ ಪೂಜಾರಿ

ಉಡುಪಿ ಮಾರ್ಚ್ 19: ಉಡುಪಿ ಜನರಿಗೆ ತಿಳುವಳಿಕೆ ಕಡಿಮೆ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಜನರಿಗೆ ತಿಳುವಳಿಕೆ ಕಡಿಮೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಹುದ್ದೆಯ ಘನತೆಗೆ ತಕ್ಕುದಲ್ಲದ ಮಾತನಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು , ಬಜೆಟ್ ಮಂಡನೆ ಸಂದರ್ಭದಲ್ಲಿ ಕರಾವಳಿ ಗೆ ಅನ್ಯಾಯ ಮಾಡಿದ್ರಿ, ವಿಧಾನ ಸೌಧದ ಎದುರು ಕರಾವಳಿ ಶಾಸಕರು ಧರಣಿ ಕೂತದ್ದು ಮರೆತ್ರಾ? ಎಂದು ಪ್ರಶ್ನೆ ಮಾಡಿದರು.

ಮುಖ್ಯಮಂತ್ರಿಯಾಗಿ ಕರಾವಳಿಗೆ ನಿಮ್ಮ ಕೊಡುಗೆ ಏನುಂತ ಮೊದಲು ಹೇಳಿ, ಉಡುಪಿ ಜನತೆ ನಿಮ್ಮ ಮುಂದೆ ತಿರುಗಿ ಬಿದ್ದಿದ್ದು, ನಿಮಗೆ ಮತ ಹಾಕಿಲ್ಲ ಎಂದು ಕರಾವಳಿ ಜನರ ಅವಹೇಳನ ಮಾಡ್ತಾ ಇದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಡುಪಿ ಜನರನ್ನು ಅವಹೇಳನ ಮಾಡಿದ್ದಕ್ಕೆ ಹೇಳಿಕೆ ವಾಪಾಸು ಪಡೆದು ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ಯಾವ ಸಿಎಂ‌ ಕೂಡಾ ನಿಮ್ಮಷ್ಟು‌ ಕರಾವಳಿಯನ್ನು ಅವಹೇಳನ ಮಾಡಿಲ್ಲ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲೇ ಉಡುಪಿ ಮುಂಚೂಣಿಯಲ್ಲಿದೆ. ಕರಾವಳಿಯ ಅಭಿವೃದ್ಧಿ ಗೆ ದೇವೇಗೌಡರ ಕುಟುಂಬ ಕಾರಣ ಅಲ್ಲ, ರೇವಣ್ಣ ಲೋಕೋಪಯೋಗಿ ಇಲಾಖೆಯಿಂದ ಕರಾವಳಿಗೆ ಏನು‌ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ನಿಮ್ಮ ಕುಟುಂಬ ರಾಜಕಾರಣಕ್ಕೆ ಕರಾವಳಿಗರು ಬೆಲೆ ನೀಡಲ್ಲ, ನಿಮ್ಮ ಪಕ್ಷಕ್ಕೆ ವಿದ್ಯಾವಂತ ಜನರು ವೋಟ್ ಹಾಕಲ್ಲ, ಮುಂದಿನ ಚುನಾವಣೆಯಲ್ಲಿ ಜಿಡಿಎಸ್ ಅಭ್ಯರ್ಥಿಗೆ ತಕ್ಕಪಾಠ ಕಲಿಸ್ತಾರೆ ಎಂದು ಹೇಳಿದರು. ನಿಮ್ಮ ಈ ಮಾತಿನಿಂದ ಬಿಜೆಪಿಗೆ ಬಹುಮತ ಬರಲು ಅನುಕೂಲವಾಗಿದೆ ಎಂದು ಹೇಳಿದರು.