ಕೊಡಗು, ಜನವರಿ 03: ಸುಧೀರ್ ಅತ್ತಾವರ ನಿರ್ದೇಶನದ ಕೊರಗಜ್ಜ ಸಿನೆಮಾ ತಂಡ ಸಿನೆಮಾದ ಹಾಡುಗಳ ರೀಲ್ಸ್ ಸ್ಪರ್ಧೆಗೆ ಕರೆ ನೀಡಿದ್ದು, ಇದು ದೈವಾರಾಧಕರ ಮತ್ತು ನರ್ತಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂತಾರ ಸಿನೆಮಾದ ಯಶಸ್ಸಿನ ಬಳಿಕ ಇದೀಗ ದೈವಾರಾಧನೆ ಕುರಿತಂತೆ ಸಿನೆಮಾಗಳು ಬರಲಾರಂಭಿಸಿದೆ. ಇದೀಗ ಸುಧೀರ್ ಅತ್ತಾವರ ನಿರ್ದೇಶನದ ಕೊರಗಜ್ಜ ಸಿನೆಮಾ ಬಿಡುಗಡೆಗೆ ಸಿದ್ದವಾಗಿದ್ದು, ಅದೂ ಕೂಡ ಕರಾವಳಿಯ ಕಾರ್ಣಿಕ ಕೊರಗಜ್ಜನ ಕುರಿತಾದ ಸಿನೆಮಾವಾಗಿದ್ದು, ಈಗಾಗಲೇ ಹಾಡುಗಳು ಯುಟ್ಯೂಬ್ ನಲ್ಲಿ ರಿಲೀಸ್ ಆಗಿದೆ.


ಸದ್ಯ ಈ ಚಿತ್ರತಂಡ ಸಿನಿಮಾದ ಪ್ರಚಾರಕ್ಕಾಗಿ ಇದೀಗ ಕೊರಗಜ್ಜನ ರೀಲ್ಸ್ ಮಾಡುವ ಸ್ಪರ್ಧೆ ಆಯೋಜಿಸಿದೆ. ಇದಕ್ಕೆ ಭರ್ಜರಿ ಬಹುಮಾನವನ್ನೂ ಇಟ್ಟಿದೆ. ಈಗಾಗಲೇ ಸಾವಿರಾರು ರೀಲ್ಸ್​ಗಳು ಕೂಡ ಸಿದ್ಧವಾಗಿವೆ. ಆದರೆ ಸಿನಿಮಾ ತಂಡದ ಈ ಪ್ರಚಾರದ ಗಿಮಿಕ್ಕ್​ ಅನ್ನ ಕೊಡಗಿನ ದೈವ ಆರಾಧಕರು ಹಾಗೂ ದೈವ ನರ್ತಕರು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಮಡಿಕೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಸಂಘದ ಸದಸ್ಯರು ಸಿನಿಮಾ ತಂಡ ಕೀಳು ಅಭಿರುಚಿಗಾಗಿ ಈ ರೀಲ್ಸ್ ಸ್ಪರ್ಧೆಗೆ ಕರೆ ಕೊಟ್ಟಿದೆ ಎಂದು ಟೀಕಿಸಿದೆ.


ಈ ರೀಲ್ಸ್ ಸ್ಪರ್ಧೆ ಆಯೋಜನೆಯಿಂದ ಸಾವಿರಾರು ಯುವ ಜನತೆ ಬೀದಿ ಬೀದಿಗಳಲ್ಲಿ ಕೊರಗಜ್ಜನ ವೇಷ ಧರಿಸಿ ಕುಣಿಯಲು ಶುರುಮಾಡುತ್ತಾರೆ, ಇದರಿಂದ ದೈವ ನಿಂದನೆಯಾಗುತ್ತದೆ. ದೇವರ ಅಪಹಾಸ್ಯ ಮಾಡಿದಂತಾಗುತ್ತದೆ. ಇದು ಜನಪದ ಕಲೆಯಲ್ಲ. ಬದಲಿಗೆ ದೈವ ಆರಾಧನೆ. ಕೊರಗಜ್ಜನನ್ನ ನಂಬುವ ಕೋಟ್ಯಂತರ ಭಕ್ತರಿದ್ದಾರೆ. ಕೊರಗಜ್ಜನ ರೀಲ್ಸ್ ಮಾಡುವುದರಿಂದ ಇವರೆಲ್ಲರ ನಂಬಿಕೆಗೆ ಘಾಸಿಯಾಗುತ್ತದೆ ಎಂದು ದೈವ ಆರಾಧಕರು ಆಕ್ರೋಶ ಹೊರ ಹಾಕಿದ್ದಾರೆ. ಕೊರಗಜ್ಜ ಸಿನಿಮಾ ತಂಡದ ವಿರುದ್ಧ ಫಿಲ್ಮ್ ಚೇಂಬರ್ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ದೈವ ನರ್ತಕ ಮಂಜುನಾಥ್​​ ಆಗ್ರಹಿಸಿದ್ದಾರೆ.

ಸುಧೀರ್ ಅತ್ತಾವರ ನಿರ್ದೇಶನದ ಈ ಸಿನಿಮಾದ ಕೊರಗಜ್ಜ ಹಾಡುಗಳನ್ನ ಬಳಸಿ ರೀಲ್ಸ್ ಮಾಡುವಂತೆ ಸಿನಿಮಾ ತಂಡ ಕರೆ ನೀಡಿದೆ. ಇದಕ್ಕಾಗಿ ಒಂದು ಕೋಟಿ ರೂ ಬಹುಮಾನ ಮೀಸಲಿಟ್ಟಿದೆ. ಅಂತಿಮ ಮೂರು ಸ್ಪರ್ಧಿಗಳಿಗೆ ವಿದೇಶ ಪ್ರವಾಸದ ಬಹುಮಾನವನ್ನೂ ಘೋಷಿಸಿದೆ. ಅತಿಹೆಚ್ಚು ಲೈಕ್ಸ್ ಗಳಿಸುವ ಸ್ಪರ್ಧಿಗಳಿಗೆ ಈ ಎಲ್ಲಾ ಬಹುಮಾನ ಲಭಿಸಲಿವೆ ಎಂದು ಚಿತ್ರ ತಂಡ ಆಫರ್ ನೀಡಿದೆ. ಆದರೆ ನಂಬಿದವರಿಗೆ ಇಂಬು ನೀಡುವ ದೇವರೆಂದೇ ಖ್ಯಾತಿಯಾಗಿರುವ ಕೊರಗಜ್ಜನನ್ನ ಬಳಸಿ ರೀಲ್ಸ್ ಮಾಡಲು ಹೊರಟಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

Share Information