ಕೊಪ್ಪಳ, ಮಾರ್ಚ್ 26: ನಗರಸಭೆಯ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಕಿರಿಯ ಅಭಿಯಂತರ (JE) ಸೋಮಲಿಂಗಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪೌರಾಡಳಿತ ಇಲಾಖೆ ಆದೇಶ ಹೊರಡಿಸಿದೆ.

2023-24 ಮತ್ತು 2024-25ನೇ ಸಾಲಿನ ಅವಧಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಡೆದ ಒಟ್ಟು 366 ಕಾಮಗಾರಿಗಳಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ. ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯಾವುದೇ ಕೆಲಸ ನಿರ್ವಹಿಸದೆಯೇ ಅಥವಾ ಅರೆಬರೆ ಕೆಲಸ ಮಾಡಿ, ಸುಳ್ಳು ಬಿಲ್ಗಳನ್ನು ಸೃಷ್ಟಿಸುವ ಮೂಲಕ ಸುಮಾರು 10 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಹಿಂದೆ ಲೋಕಾಯುಕ್ತ ಅಧಿಕಾರಿಗಳು ನಗರಸಭೆಯ ಮೇಲೆ ನಡೆಸಿದ ದಿಢೀರ್ ದಾಳಿಯ ಸಂದರ್ಭದಲ್ಲಿ ಈ ಹಗರಣದ ಕರಾಳ ಮುಖ ಅನಾವರಣಗೊಂಡಿತ್ತು. ದಾಖಲೆಗಳ ತೀವ್ರ ಪರಿಶೀಲನೆ ನಡೆಸಿದಾಗ, ಅಭಿಯಂತರರು ಅಧಿಕಾರ ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆಗಳ ಮೂಲಕ ಹಣ ಬಿಡುಗಡೆ ಮಾಡಿರುವುದು ಪತ್ತೆಯಾಗಿತ್ತು. ಲೋಕಾಯುಕ್ತ ವರದಿಯನ್ನಾಧರಿಸಿ ಪೌರಾಡಳಿತ ಇಲಾಖೆಯ ನಿರ್ದೇಶಕರು ಈಗ ಶಿಸ್ತುಕ್ರಮ ಕೈಗೊಂಡಿದ್ದಾರೆ.
ಸರ್ಕಾರಿ ಹಣದ ದುರುಪಯೋಗ ಮತ್ತು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೋಮಲಿಂಗಪ್ಪ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಬಿದ್ದಿದೆ. ಈ ಬೃಹತ್ ಹಗರಣವು ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದು, ಹಗರಣದಲ್ಲಿ ಭಾಗಿಯಾಗಿರುವ ಇತರೆ ಅಧಿಕಾರಿಗಳಿಗೂ ತನಿಖೆಯ ಬಿಸಿ ತಟ್ಟುವ ಸಾಧ್ಯತೆಯಿದೆ.