ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ನಕಲಿ ವೆಬ್ ಸೈಟ್ ಸೃಷ್ಠಿಸಿ ಲಕ್ಷಗಟ್ಟಲೆ ಜೇಬಿಗಿಳಿಸಿದ ಅರ್ಚಕರು…!

ಉಡುಪಿ ನವೆಂಬರ್ 28: ಕೊಲ್ಲೂರು ದೇವಸ್ಥಾನದ ಅರ್ಚಕರೆ ದೇವಸ್ಥಾನದ ನಕಲಿ ವೆಬ್ ಸೈಟ್ ಕ್ರಿಯೆಟ್ ಮಾಡಿ ದೇವಸ್ಥಾನದ ಭಕ್ತರ ಲಕ್ಷಾಂತರ ರೂಪಾಯಿ ಹಣವನ್ನು ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.

ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಮತ್ತೊಂದು ದೋಖಾ ಪ್ರಕರಣ ಬಯಲಾಗಿದೆ. ದೂರದ ಊರಿನಿಂದ ದೇವಿಗೆ ಬಂದು ಸೇವೆ ಕೊಡಲು ಸಾಧ್ಯವಾಗದ ನೂರಾರು ಭಕ್ತರು ದೇವಸ್ಥಾನದ ಅಧಿಕೃತ ವೆಬ್‍ಸೈಟ್ ಮೂಲಕ ಸೇವೆಗೆ ದೇಣಿಗೆ ಕೊಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ದೇವಸ್ಥಾನ ವೆಬ್‍ಸೈಟ್ ನಕಲಿ ಮಾಡಿ, ಭಕ್ತರ ಹಣ ದೋಚಿದ್ದಾರೆ. ಹೆಸರಿಗೊಂದು ಪೂಜೆ ಮಾಡಿಸಿ ಪ್ರಸಾದ ಕಳುಹಿಸಿ ಲಕ್ಷಗಟ್ಟಲೆ ಕಾಸು ಜೇಬಿಗಿಳಿಸಿ ಕೈತೊಳೆದುಕೊಂಡಿದ್ದಾರೆ.

ಸಂಪೂರ್ಣ ಕೊಲ್ಲೂರು ದೇವಸ್ಥಾನದ ವೆಬ್‍ಸೈಟ್ ನಕಲಿ ಮಾಡಿ, ಆಪ್ಶನ್ಸ್, ಫೋಟೋಗಳು, ಸೇವಾ ವಿವರಗಳೆಲ್ಲಾ ಒಂದೇ ರೀತಿ ಇರುವ ಹಾಗೆ ಖದೀಮರು ನಕಲಿ ವೆಬ್‍ಸೈಟ್ ರೂಪಿಸಿದ್ದಾರೆ. ಇದನ್ನು ನಂಬಿ ಭಕ್ತರು ದೇವರ ಸೇವೆಗೆ ಈ ವೆಬ್‍ಸೈಟ್‍ನಲ್ಲಿ ಪೂಜೆ ಬುಕ್ ಮಾಡುತ್ತಿದ್ದರು. ಆದರೆ ಹಣ ಮಾತ್ರ ಆನ್‍ಲೈನ್ ಮೂಲಕ ದೇವಸ್ಥಾನದ ಅಕೌಂಟಿಗೆ ಹೋಗದೇ ದೇವಸ್ಥಾನದ ಅರ್ಚಕರೊಬ್ಬರ ಖಾಸಗಿ ಖಾತೆಗೆ ಹೋಗಿ ಬೀಳುತ್ತಿತ್ತು.

ಈ ವಿಚಾರ ದೇವಸ್ಥಾನದ ಹೊಸ ಇಒ ಗಮನಕ್ಕೆ ಬಂದಿದ್ದು, ಇಒ ಸೆನ್(ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಅಪರಾಧ ಠಾಣೆ) ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ಶುರು ಮಾಡಿದಾಗ ದೇವಸ್ಥಾನದಲ್ಲೇ ಅರ್ಚಕ ವೃತ್ತಿ ಮಾಡುತ್ತಿರುವವರೇ ನಕಲಿ ವೆಬ್‍ಸೈಟ್‍ನ ಅಡ್ಮಿನ್ ಅನ್ನೋದು ಪೊಲೀಸರಿಗೆ ಗೊತ್ತಾಗಿದ್ದು, ತನಿಖೆ ಪೂರ್ಣಗೊಂಡ ಕೂಡಲೇ ದೇವರ ಹಣ ದೋಚಿದ ಕಳ್ಳ ಸಿಕ್ಕಿಹಾಕಿಕೊಳ್ಳುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

comments