ಕೊಲ್ಲಂ ಮಾರ್ಚ್ 17: ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿದ್ದಾಗಲೇ ಹೌಸ್ ಸರ್ಜನ್ ಡಾ. ವಂದನಾ ದಾಸ್ ಅವರನ್ನು ಬರ್ಬರವಾಗಿ ಇರಿದು ಕೊಂದ ಪ್ರಕರಣದಲ್ಲಿ ಆರೋಪಿ ಸಂದೀಪ್ ತಪ್ಪಿತಸ್ಥ ಎಂದು ಕೊಲ್ಲಂ ಸೆಷನ್ಸ್ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. ಈ ಅಮಾನವೀಯ ಕೃತ್ಯಕ್ಕೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಇದೇ ಮಾರ್ಚ್ 19 ರಂದು ಪ್ರಕಟಿಸಲಿದೆ.

ಮೇ 10, 2023ರ ಮುಂಜಾನೆ, ಪೊಲೀಸ್ ಕಸ್ಟಡಿಯಲ್ಲಿದ್ದ ಶಾಲಾ ಶಿಕ್ಷಕ ಸಂದೀಪ್ನನ್ನು ಚಿಕಿತ್ಸೆಗಾಗಿ ಕೊಟ್ಟಾರಕ್ಕರ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಹಿಂಸಾತ್ಮಕವಾಗಿ ವರ್ತಿಸಿದ ಸಂದೀಪ್, ಸರ್ಜಿಕಲ್ ಚಾಕುವಿನಿಂದ ಡಾ. ವಂದನಾ ದಾಸ್ (23) ಅವರಿಗೆ ಮನಬಂದಂತೆ ಇರಿದು ಕೊಂದಿದ್ದನು.

ಕೊಲ್ಲಂ ಗ್ರಾಮೀಣ ಅಪರಾಧ ವಿಭಾಗದ ಡಿವೈಎಸ್ಪಿ ಎಂ.ಎಂ. ಜೋಸ್ ನೇತೃತ್ವದಲ್ಲಿ ಕೇವಲ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿತ್ತು. ಪ್ರಕರಣದಲ್ಲಿ 70ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ.
ಕಾನೂನು ತಿದ್ದುಪಡಿ: ಈ ಪ್ರಕರಣವು ದೇಶಾದ್ಯಂತ ವೈದ್ಯಕೀಯ ವಲಯದಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕೇರಳ ಸರ್ಕಾರವು ಆರೋಗ್ಯ ಕಾರ್ಯಕರ್ತರ ರಕ್ಷಣೆಗಾಗಿ ಕಟ್ಟುನಿಟ್ಟಿನ ಕಾಯ್ದೆಯನ್ನು ಜಾರಿಗೆ ತಂದಿತು.
ಆರೋಪಿ ಸಂದೀಪ್ ತಾನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಪ್ರಾಸಿಕ್ಯೂಷನ್ ಮಂಡಿಸಿದ ಭದ್ರ ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಲಯವು ಈ ತೀರ್ಪು ನೀಡಿದೆ.