ಕೋಲ್ಕತ್ತಾ, ಮಾರ್ಚ್ 15: ಪಶ್ಚಿಮ ಬಂಗಾಳದ Kolkata ನಗರದಲ್ಲಿರುವ ಜೀಬನ್ ಜ್ಯೋತಿ ಮಾದರಿ ಶಾಲೆಯಲ್ಲಿ ನಡೆದಿದ್ದ ಎನ್ನಲಾದ ಸಾಂಸ್ಕೃತಿಕ ಕಾರ್ಯಕ್ರಮದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ., . ವಿಡಿಯೋದಲ್ಲಿ ಕೆಲ ವಿದ್ಯಾರ್ಥಿನಿಯರು ಟವೆಲ್ ಸುತ್ತಿಕೊಂಡು ವೇದಿಕೆಯ ಮೇಲೆ ನೃತ್ಯ ಪ್ರದರ್ಶನ ನೀಡುತ್ತಿರುವುದು ಕಂಡುಬಂದಿದ್ದು, ಈ ದೃಶ್ಯಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

ವೈರಲ್ ಆಗಿರುವ ವಿಡಿಯೋದಲ್ಲಿ ವೇದಿಕೆಯ ಹಿನ್ನಲೆಯಲ್ಲಿ ಶಾಲೆಯ ಹೆಸರಿರುವ ಬ್ಯಾನರ್ ಸ್ಪಷ್ಟವಾಗಿ ಕಾಣಿಸುತ್ತದೆ. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ನೂರಾರು ವಿದ್ಯಾರ್ಥಿಗಳು ಪ್ರೇಕ್ಷಕರಾಗಿ ಕುಳಿತು ಈ ಪ್ರದರ್ಶನವನ್ನು ವೀಕ್ಷಿಸುತ್ತಿರುವ ದೃಶ್ಯಗಳೂ ಕಾಣುತ್ತವೆ. ನೃತ್ಯದ ಶೈಲಿ ಮತ್ತು ವೇಷಭೂಷಣದ ಬಗ್ಗೆ ಕೆಲವು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಶಾಲಾ ವಾತಾವರಣಕ್ಕೆ ಸೂಕ್ತವಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹಾಕುವ ವೇದಿಕೆಯಾಗುವುದರ ಜೊತೆಗೆ ಶಿಕ್ಷಣ, ಶಿಸ್ತು ಹಾಗೂ ನೈತಿಕ ಮೌಲ್ಯಗಳನ್ನು ಬಲಪಡಿಸುವಂತಿರಬೇಕು. ಆದರೆ ಇಂತಹ ರೀತಿಯ ಪ್ರದರ್ಶನಕ್ಕೆ ಅವಕಾಶ ನೀಡಿರುವುದು ಸರಿಯೇ ಎಂಬ ಪ್ರಶ್ನೆಯನ್ನು ಅನೇಕರು ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.
ಇದಕ್ಕೂ ಮಧ್ಯೆ, ವೈರಲ್ ಆಗಿರುವ ಈ ವಿಡಿಯೋ ಯಾವ ದಿನಾಂಕದ ಕಾರ್ಯಕ್ರಮಕ್ಕೆ ಸಂಬಂಧಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೇದಿಕೆಯ ಮೇಲೆ ನೃತ್ಯ ಪ್ರದರ್ಶನ ನೀಡಿದವರು ನಿಜವಾಗಿಯೂ ಶಾಲೆಯ ವಿದ್ಯಾರ್ಥಿನಿಯರೇ ಅಥವಾ ಹೊರಗಿನಿಂದ ಆಹ್ವಾನಿತ ಕಲಾವಿದರೇ ಎಂಬುದರ ಕುರಿತು ಸಹ ಇನ್ನೂ ಸ್ಪಷ್ಟತೆ ಲಭ್ಯವಾಗಿಲ್ಲ.
ವಿವಾದಕ್ಕೆ ಕಾರಣವಾದ ಈ ವಿಡಿಯೋ ಕುರಿತು ಶಾಲಾ ಆಡಳಿತ ಮಂಡಳಿಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ. ಘಟನೆಯ ಬಗ್ಗೆ ಸ್ಥಳೀಯ ಶಿಕ್ಷಣಾಧಿಕಾರಿಗಳು ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲನೆಯಾಗಬೇಕಾದ ಮೌಲ್ಯಗಳು ಮತ್ತು ನಿಯಮಗಳ ಕುರಿತು ಮತ್ತೆ ಗಮನ ಸೆಳೆಯುವಂತಾಗಿದೆ.