ಕೋಲಾರ,ಮಾರ್ಚ್ 28: ತರಕಾರಿ ಸಾಗಿಸುತ್ತಿದ್ದ ಟೆಂಪೋವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ನಲ್ಲಿದ್ದ 3 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಕೆರೆ ಕಟ್ಟೆ ಬಳಿ ನಡೆದಿದೆ.

ಮೃತ ಬಾಲಕಿಯನ್ನು ಕ್ರುತ್ಯಾರೆಡ್ಡಿ ( 3 ) ಎಂದು ಗುರುತಿಸಲಾಗಿದೆ. ಬೆಂಗಳೂರಿಗೆ ತರಕಾರಿ ತಲುಪಿಸುವ ತರಾತುರಿಯಲ್ಲಿದ್ದ ಟೆಂಪೋ ಚಾಲಕ, ವಾಹನವನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದೇ ಈ ಅಪಘಾತಕ್ಕೆ ನೇರ ಕಾರಣ ಎಂದು ಹೇಳಲಾಗಿದೆ. ಅಪಘಾತದ ಸಮಯದಲ್ಲಿ ಬೈಕ್ನಲ್ಲಿದ್ದ ಉಳಿದ ಇಬ್ಬರು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ನಡೆದ ಸ್ಥಳಕ್ಕೆ ರಾಯಲ್ಪಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.