Connect with us

    DAKSHINA KANNADA

    ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿಸೆಂಬರ್ 21ರಿಂದ 27ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ

    ಪುತ್ತೂರು: 700 ವರ್ಷಗಳ ಧಾರ್ಮಿಕ ಇತಿಹಾಸವಿರುವ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿಸೆಂಬರ್ 21ರಿಂದ 27ರವರೆಗೆ ದೇವಾಲಯದ ಆಚಾರ್ಯರಾದ ಬ್ರಹ್ಮಶ್ರೀ ಕೆಮ್ಮಿಂಜೆ ರಾಜೇಶ್ ತಂತ್ರಿ ಮತ್ತು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಅನ್ನದಾಸೋಹದೊಂದಿಗೆ ನಡೆಯಲಿದೆ ಎಂದು ಉದ್ಯಮಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಸ್. ಅಶೋಕ್ ಕುಮಾರ್ ರೈ ತಿಳಿಸಿದರು.


    ಅವರು ಬುಧವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿವರಗಳನ್ನು ನೀಡಿದರು. ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಕೊರೋನಾ ಲಾಕ್‍ಡೌನ್ ಕಾರಣದಿಂದಾಗಿ ಈ ಹಿಂದೆ ಎರಡು ಬಾರಿ ಮುಂದೂಡಲ್ಪಟ್ಟಿತ್ತು. ಇದೀಗ 14ವರ್ಷಗಳ ನಂತರ ನಡೆಸಲು ನಿಶ್ಚಯಿಸಲಾದ ಬ್ರಹ್ಮಕಲಶೋತ್ಸವವು ಡಿಸೆಂಬರ್ 21ರಿಂದ ನಡೆಯುತ್ತಿದೆ.


    ಶ್ರೀ ದೇವಾಲಯದಲ್ಲಿ ರೂ 2ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಶ್ರೀ ದೇವರ ಗರ್ಭಗುಡಿಯ ಛಾವಣಿಗೆ ತಾಮ್ರದ ಹೊದಿಕೆ ಹೊದಿಸಲಾಗಿದೆ. ವಿವಿಧ ಕಾಮಗಾರಿಗಳನ್ನು ನಿರಂತರವಾಗಿ ನಿರ್ವಹಿಸಲಾಗಿದೆ. ಎಲ್ಲಾ ವ್ಯವಸ್ಥೆಗಳು ಸೇರಿದಂತೆ ಬ್ರಹ್ಮಕಲಶೋತ್ಸವಕ್ಕೆ ಒಟ್ಟು ರೂ. 1.30ಕೋಟಿ ವೆಚ್ಚವಾಗಲಿದೆ. ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಗಳಿಗೆ ಸಂಬಂಧಿಸಿದಂತೆ ಎಲ್ಲಾ ಮನೆಗಳವರು ಈ ಧಾರ್ಮಿಕ ಕಾರ್ಯಕ್ಕೆ ಪೂರ್ಣ ಬೆಂಬಲ ನೀಡಿದ್ದಾರೆ ಎಂದರು.
    ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಡಿಸೆಂಬರ್ 20, 21, 22, 23ರಂದು ಹಸಿರುವಾಣಿ ಸಮರ್ಪಣೆ ನಡೆಯಲಿದ್ದು ಡಿ. 21ರಂದು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಹಯೋಗದೊಂದಿಗೆ ಭಜನಾಮೃತ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಕಲಶೋತ್ಸವ ಕಾರ್ಯಾಲಯ, ಪ್ರಾಚ್ಯವಸ್ತು ಪ್ರದರ್ಶನ, ಸಾಕ್ಷ್ಯಚಿತ್ರ ಬಿಡುಗಡೆ ನಡೆಯಲಿದೆ. ಸಭಾ ವೇದಿಕೆಯನ್ನು ಹಿರಿಯರಾದ ಗಿರೀಜಾ ಸಂಜೀವ ರೈ ಉದ್ಘಾಟಿಸಲಿದ್ದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.

    ಡಿಸೆಂಬರ್ 21ರಂದು ಸಾಮೂಹಿಕ ಪ್ರಾರ್ಥನೆ, ದೇವತಾ ಪ್ರಾರ್ಥನೆ ಡಿಸೆಂಬರ್ 22ರಂದು ಉಷಾಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ, ಶಕ್ತಿ ದಂಡಕ ಮಂಡಲ ಪೂಜೆ, ಡಿಸೆಂಬರ್ 23ರಂದು ಮಹಾಗಣಪತಿ ಹೋಮ, ಅಂಕುರ ಪೂಜೆ, ಮಂಟಪ ನಮಸ್ಕಾರ, ಕುಂಭೇಶ ಕರ್ಕರೀ ಪೂಜೆ, ಡಿಸೆಂಬರ್ 24ರಂದು ಉಷಾ ಪೂಜೆ, ಸಂಜೆ ಶ್ರೀ ಚಕ್ರಪೂಜೆ, ಡಿಸೆಂಬರ್ 25ರಂದು ಬೆಳಗ್ಗೆ ಉಷಾಪೂಜೆ ಸಂಜೆ ಅಧಿವಾಸ ಹೋಮ, ಡಿಸೆಂಬರ್ 26ರಂದು ಬೆಳಗ್ಗೆ ಚಂಡಿಕಾಹೋಮ ಬಳಿಕ 10.45ರ ಕುಂಭ ಲಗ್ನದಲ್ಲಿ ಶ್ರೀ ಮಹಿಷಮರ್ದಿನಿ ದೇವಿಗೆ ಸಹಸ್ರ ಬ್ರಹ್ಮಕಲಾಶಾಭಿಷೇಕ ಸಂಜೆ ಲಕ್ಷ ಕುಂಕುಮಾರ್ಚನೆ, ರಾತ್ರಿ ರಂಗಪೂಜೆ, ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ ಸಮರ್ಪಣೆ ನಡೆಯಲಿದೆ.
    ಡಿಸೆಂಬರ್ 21ರಂದು ಆದಿಚುಂಚನಗಿರಿ ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಸೋಣೂರು ಶ್ರೀ ವಿಖ್ಯಾತನಂದ ಸ್ವಾಮೀಜಿ ಪಾಲ್ಗೊಳ್ಳಲಿದ್ದು ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅತಿಥಿಗ್ರಹ ಉದ್ಘಾಟಿಸಲಿದ್ದಾರೆ. ಡಿಸೆಂಬರ್ 22ರಂದು ಪ್ರದಿಲ್ ಎ. ರೈ ಅಧ್ಯಕ್ಷತೆಯಲ್ಲಿ ಚಿಣ್ಣರ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಡಿಸೆಂಬರ್ 23ರಂದು ಗುರುಕುಲ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಸಚಿವ ಮುರುಗೇಶ ನಿರಾಣಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಹೆಗ್ಡೆಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಡಿಸೆಂಬರ್ 24ರಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಡಾ. ಕಲ್ಲಡ್ಕ ಪ್ರಭಾಕರ ಭಟ್, ಸಚಿವರಾದ ಎಸ್. ಅಂಗಾರ ಮತ್ತು ಶ್ರೀರಾಮುಲು ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಡಿಸೆಂಬರ್ 25ರಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ.

    ಡಿಸೆಂಬರ್ 26ರಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಅಲ್ಲದೇ, ಡಿ. 21ರಿಂದ 26ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ಡಿಸೆಂಬರ್ 20ರಿಂದ 26ರವರೆಗೆ ಪ್ರತೀದಿನ ಶ್ರೀ ದೇವಾಲಯಕ್ಕೆ ಭೇಟಿ ನೀಡುವ ಊರ ಪರವೂರ ಭಕ್ತರಿಗೆ ಬೆಳಗ್ಗೆ ಉಪಹಾರ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಉಪಹಾರ, ರಾತ್ರಿ ಅನ್ನಸಂತರ್ಪಣೆ ನಿರಂತರವಾಗಿ ನಡೆಯಲಿವೆ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಾಣಾಜೆ, ವಿಟ್ಲ, ಸುಳ್ಯ, ನೆಲ್ಯಾಡಿ, ಬಂಟ್ವಾಳ ಮತ್ತು ಕಡಬ ಕಡೆಗಳಿಂದ ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವಿವರಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply