ಕೊಡಗು, ಏಪ್ರಿಲ್ 22: ಖಾಸಗಿ ಹೋಂಸ್ಟೇ ಒಂದರಲ್ಲಿ ಅಮೆರಿಕ ಮೂಲದ ಪ್ರವಾಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಕೊಡಗು ಜಿಲ್ಲೆಯ ದಕ್ಷಿಣ ಭಾಗದ ಗಡಿ ಗ್ರಾಮವಾದ ಕುಟ್ಟದ ಎಂಬಲ್ಲಿ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಕಾರ್ಮಿಕ ಹಾಗೂ ಹೋಂಸ್ಟೇ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆಯು ಪ್ರವಾಸದ ನಿಮಿತ್ತ ಏಪ್ರಿಲ್ 19 ರಂದು ಕುಟ್ಟ ಗ್ರಾಮದ ‘ದೇವಿ ವಿಲ್ಲಾ’ ಎಂಬ ಹೋಂಸ್ಟೇಗೆ ಆಗಮಿಸಿದ್ದರು. ಅಂದು ರಾತ್ರಿ ಜಾರ್ಖಂಡ್ ಮೂಲದ ಕಾರ್ಮಿಕ ವೃಜೇಶ್ ಕುಮಾರ್ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕೃತ್ಯಕ್ಕೆ ಸಹಕರಿಸಿದ ಮತ್ತು ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪದ ಮೇಲೆ ಹೋಂಸ್ಟೇ ಮಾಲೀಕ ವಿಶಾಲ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲಗಳ ಪ್ರಕಾರ, ಘಟನೆಯ ಬಳಿಕ ಮಹಿಳೆ ಯಾರಿಗೂ ಮಾಹಿತಿ ನೀಡದಂತೆ ತಡೆಯಲು ಹೋಂಸ್ಟೇಯ ವೈಫೈ ಸಂಪರ್ಕ ಕಡಿತಗೊಳಿಸಿ, ಅವರನ್ನು ದಿಗ್ಬಂಧನದಲ್ಲಿ ಇರಿಸಲಾಗಿತ್ತು ಎನ್ನಲಾಗಿದೆ. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಮೈಸೂರು ತಲುಪಿದ ಮಹಿಳೆ, ಅಮೆರಿಕ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ. ರಾಯಭಾರ ಕಚೇರಿಯ ಇಮೇಲ್ ಮಾಹಿತಿ ಆಧರಿಸಿ ಕುಟ್ಟ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸಂತ್ರಸ್ತ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.