ಕಣ್ಣೂರು ಮೇ 07: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮಟ್ಟನೂರಿನಿಂದ ಪೆರಾವೂರಿಗೆ ಸ್ಥಳಾಂತರಗೊಂಡು ಅನಿರೀಕ್ಷಿತ ಸೋಲು ಕಂಡಿರುವ ಕೆ.ಕೆ. ಶೈಲಜಾ ಅವರು ಈಗ ಸಿಪಿಐ(ಎಂ) ರಾಜ್ಯ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಗೆಲ್ಲುವುದು ಕಷ್ಟ ಎಂದು ತಿಳಿದಿದ್ದರೂ ಪಕ್ಷ ನನ್ನನ್ನು ಪೆರಾವೂರ್ನಲ್ಲಿ ಸ್ಪರ್ಧಿಸಲು ಒತ್ತಾಯಿಸಿತು” ಎಂದು ಶೈಲಜಾ ಅವರು ಪಕ್ಷದ ರಾಜ್ಯ ಕಾರ್ಯದರ್ಶಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಹಿಂದಿನ ಚುನಾವಣೆಯಲ್ಲಿ ಮಟ್ಟನೂರಿನಲ್ಲಿ ದಾಖಲೆ ಬಹುಮತದಿಂದ ಗೆದ್ದಿದ್ದ ಶೈಲಜಾ ಅವರನ್ನು ಪೆರಾವೂರಿಗೆ ಕಳುಹಿಸಿದ ನಿರ್ಧಾರವು ಈಗ ಪಕ್ಷದೊಳಗೆ ಆತ್ಮಾವಲೋಕನಕ್ಕೆ ಕಾರಣವಾಗಿದೆ. ಸಿಪಿಐ(ಎಂ) ಭದ್ರಕೋಟೆಗಳಲ್ಲೇ ಅವರಿಗೆ ನಿರೀಕ್ಷಿತ ಬೆಂಬಲ ಸಿಗದಿರುವುದು ಸೋಲಿಗೆ ಮುಖ್ಯ ಕಾರಣ ಎನ್ನಲಾಗಿದೆ.
ಪಯಂನಲ್ಲಿ 1,500 ಮತಗಳ ಮುನ್ನಡೆಯ ನಿರೀಕ್ಷೆಯಲ್ಲಿದ್ದ ಎಲ್ಡಿಎಫ್ಗೆ ನಿರಾಸೆಯಾಗಿದ್ದು, ಶೈಲಜಾ ಕೇವಲ 13 ಬೂತ್ಗಳಲ್ಲಿ ಮಾತ್ರ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಸಿಪಿಐ(ಎಂ) ಆಡಳಿತವಿರುವ ಇರಿಟ್ಟಿ ಪುರಸಭೆಯ 32 ಬೂತ್ಗಳಲ್ಲಿ 20ರಲ್ಲಿ ಯುಡಿಎಫ್ ಅಭ್ಯರ್ಥಿ ಸನ್ನಿ ಜೋಸೆಫ್ ಮುನ್ನಡೆ ಸಾಧಿಸಿ, ಸುಮಾರು 2,200 ಮತಗಳ ಅಂತರ ಕಾಯ್ದುಕೊಂಡರು.
ಅಯ್ಯಂಕುನ್, ಅರಲಂ, ಕೇಳಕಂ, ಕೊಟ್ಟಿಯೂರು ಮತ್ತು ಕಾಣಿಚಾರ್ ಪಂಚಾಯತ್ಗಳಲ್ಲಿ ಯುಡಿಎಫ್ ಭಾರಿ ಬಹುಮತವನ್ನು ಗಳಿಸಿದೆ. ಅರಲಂನಲ್ಲಿ 3,900 ಮತ್ತು ಕಾಣಿಚಾರ್ನಲ್ಲಿ 2,184 ಮತಗಳ ಮುನ್ನಡೆ ಸನ್ನಿ ಜೋಸೆಫ್ ಅವರ ಗೆಲುವನ್ನು ಸುಲಭಗೊಳಿಸಿತು. ಶೈಲಜಾ ಅವರು ಮುಳಕುನ್ ಪಂಚಾಯತ್ನಲ್ಲಿ ಕೇವಲ 700 ಮತಗಳ ಮುನ್ನಡೆ ಸಾಧಿಸಲಷ್ಟೇ ಶಕ್ತರಾದರು. ಪೆರಾವೂರ್ನಲ್ಲಿ ಶೈಲಜಾ ಅವರಂತಹ ಜನಪ್ರಿಯ ನಾಯಕಿಯನ್ನು ಕಣಕ್ಕಿಳಿಸಿ ಸೋಲುವಂತೆ ಮಾಡಿದ್ದು ಪಕ್ಷದೊಳಗಿನ ಒಂದು ವರ್ಗದ ವ್ಯವಸ್ಥಿತ ಸಂಚು ಎಂಬ ಟೀಕೆಗಳು ಕೇಳಿಬರುತ್ತಿವೆ. ಸುರಕ್ಷಿತ ಕ್ಷೇತ್ರವಾಗಿದ್ದ ಮಟ್ಟನೂರನ್ನು ಬಿಟ್ಟು ಪೆರಾವೂರ್ ಆಯ್ದುಕೊಂಡಿದ್ದೇ ಈ ರಾಜಕೀಯ ಹಿನ್ನಡೆಗೆ ನಾಂದಿಯಾಯಿತು ಎಂಬ ಚರ್ಚೆ ಸಿಪಿಐ(ಎಂ) ಕಾರ್ಯಕರ್ತರ ವಲಯದಲ್ಲಿ ತೀವ್ರಗೊಂಡಿದೆ