ಬಾನಂಗಳದಲ್ಲಿ ಚೆಲುವಿನ ಚಿತ್ತಾರ ಬಿಡಿಸಿದ ಗಾಳಿಪಟಗಳು

ಉಡುಪಿ, ಡಿಸೆಂಬರ್ 31: ಮಲ್ಪೆ ಬೀಚ್‍ನ ಸುಂದರ ಬಾನಂಗಳದಲ್ಲಿ ಸೋಮವಾರ ವಿವಿಧ ಗಾತ್ರದ ಹಾಗೂ ವಿನ್ಯಾಸದ ಗಾಳಿಪಟಗಳು ಆಕರ್ಷಕ ಚೆಲುವಿನ ಚಿತ್ತಾರ ಮೂಡಿಸಿದವು.

ಜಿಲ್ಲಾಡಳಿತ, ಮಲ್ಪೆ ಅಭಿವೃದ್ದಿ ಸಮಿತಿ ಮೂಲಕ ಇದೇ ಮೊದಲ ಬಾರಿ ನಡೆದ ಬೀಚ್ ಗಾಳಿಪಟ ಉತ್ಸವದಲ್ಲಿ, 110 ಅಡಿ ಉದ್ದದ ನಾಗನ ಹೋಲುವ  3ಡಿ ಗಾಳಿಪಟ, ಚಾರ್ಲಿ ಚಾಪ್ಲಿನ್ ಹೋಲುವ ಗಾಳಿಪಟ, 3ಡಿ ಡ್ರಾಗನ್, 3ಡಿ ಮೀನು, 3ಡಿ ಕಪ್ಪೆ, 3ಡಿ ಅಶೋಕ ಚಕ್ರ, 3ಡಿ ಅಕ್ಟೋಪಸ್, 3ಡಿ ಟೈಗರ್ ಶೇಪ್, 3ಡಿ ರ್ಯಾಬಿಟ್, ಲೇಡಿ ಬಗ್ ಗಾಳಿಪಟ, 3ಡಿ ಸಾಂತಾಕ್ಸಾಸ್ ಗಾಳಿಪಟ, 3ಡಿ ಹಾರ್ಟ್ ಶೇಪ್, 3ಡಿ ಪಾಂಡ ಶೇಪ್ ಹಾಗೂ ಸಂಜೆ ವೇಳೆಯಲ್ಲಿ  ವಿಶೇಷ ವಿನ್ಯಾಸದ ಎಲ್.ಇ.ಡಿ ಗಾಳಿಪಟ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಬಗೆಯ ಗಾಳಿಪಟಗಳು ಬಾನಂಗಳದಲ್ಲಿ ರಾರಾಜಿಸಿದವು.

ಬೀಚ್ ಗಾಳಿಪಟ ಉತ್ಸವ ಉದ್ಘಾಟಿಸಿದ ಶಾಸಕ ರಘುಪತಿ ಭಟ್ ಮಾತನಾಡಿ, ಮಲ್ಪೆಯಲ್ಲಿ ಇದೇ ಮೊದಲ ಬಾರಿ ಪ್ರಾಯೋಗಿಕವಾಗಿ ನಡೆದಿರುವ ಬೀಚ್ ಗಾಳಿಪಟ ಉತ್ಸವವನ್ನು ಪ್ರತಿ ವರ್ಷ ಏರ್ಪಡಿಸುವ ಮೂಲಕ ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಿ, ಪ್ರವಾಸೋದ್ಯಮದ ಅಭಿವೃದ್ದಿಗೆ ಯತ್ನಿಸಲಾಗುವುದು, ಈ ಬಾರಿ 30-35 ಮಂದಿ ವೃತ್ತಿಪಟ ಗಾಳಿಪಟ ವಿನ್ಯಾಸಗಾರರು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದು, ಆಸಕ್ತ ಸ್ಥಳೀಯರಿಗೆ ಗಾಳಿಪಟ ತಯಾರಿಕೆ ಬಗ್ಗೆ ಸಹ ತರಬೇತಿ ನೀಡುವರು ಎಂದು ಹೇಳಿದರು.

ಬೀಚ್ ಗಾಳಿಪಟ ಉತ್ಸವ ಅಂಗವಾಗಿ, ವಿವಿಧ ವಿನ್ಯಾಸದ ಗಾಳಿಪಟ ತಯಾರಿಕೆ ಬಗ್ಗೆ ಹಾಗೂ ಗಾಳಿಪಟ ಹಾರಿಸುವ ವಿಧಾನದ ಬಗ್ಗೆ ಆಸಕ್ತರಿಗೆ ತರಬೇತಿ ನೀಡಲಾಯಿತು, ಗಾಳಿಪಟ ಕುರಿತು ವಿಚಾರ ಸಂಕಿರಣ ನಡೆಯಿತು.

Facebook Comments

comments