ಕುಂದಾಪುರ ಮಗು ನಾಪತ್ತೆ ಪ್ರಕರಣ – ಕುಬ್ಜಾ ನದಿಯಲ್ಲಿ ಮಗುವಿನ ಶವ ಪತ್ತೆ

ಉಡುಪಿ ಜುಲೈ12: ಸಿದ್ದಾಪುರ ಸಮೀಪದ ಯಡಮೊಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮ್ಟಿಬೇರು ಎಂಬಲ್ಲಿ ನಿನ್ನೆ ಅಪಹರಣಕ್ಕೊಳಗಾಗಿದ್ದ ಮಗುವಿನ ಮೃತ ದೇಹ ಕುಬ್ಜಾ ನದಿಯಲ್ಲಿ ಪತ್ತೆಯಾಗಿದ್ದು, ಇಬ್ಬರ ಮಕ್ಕಳ ಜೊತೆ ತಾಯಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಈ ಸಂದರ್ಭದಲ್ಲಿ ಹೆಣ್ಣು ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಮೃತ ಮಗುವನ್ನು ಕುಮ್ಟಿಬೇರು ನಿವಾಸಿ ಸಂತೋಷ್ ನಾಯ್ಕ್ – ರೇಖಾ ದಂಪತಿಯ ಒಂದು ವರ್ಷದ ಮಗಳು ಸಾನ್ವಿಕಾ ಎಂದು ಗುರುತಿಸಲಾಗಿದೆ. ನಿನ್ನೆ ತಾಯಿಯೊಂದಿಗೆ ಮಲಗಿದ್ದ ಸಾನ್ವಿಕಾಳನ್ನು ಮುಸುಕುಧಾರಿಯೊಬ್ಬ ಅಪಹರಿಸಿದ್ದಾನೆ ಎಂದು ದೂರು ದಾಖಲಾಗಿತ್ತು. ಆದರೆ ತಾಯಿ ರೇಖಾ ನಾಯ್ಕ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಮಗುವನ್ನು ಅಪಹರಣಕಾರ ಕದ್ದೊಯ್ದಿದ್ದಾನೆ ಎಂಬ ಕಥೆ ಕಟ್ಟಿದ್ದರು.

ಇಂದು ಮನೆಯ ಹತ್ತಿರದಲ್ಲೇ ಇರುವ ಕುಬ್ಜಾ ನದಿಯಲ್ಲಿ ಮಗುವಿನ ಶವಪತ್ತೆಯಾಗಿತ್ತು. ಇದರಿಂದ ಅನುಮಾನ ಗೊಂಡು ತಾಯಿಯನ್ನು ವಿಚಾರಣೆಗೊಳಪಡಿಸಿದಾಗ, 5 ವರ್ಷದ ಗಂಡು ಮಗು ಹಾಗೂ ಕಂದಮ್ಮ ಸಾನ್ವಿಕಾ ಜತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ನಿಜ. ಈ ಸಂದರ್ಭ ಹೆಣ್ಣು ಮಗು ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ಇಬ್ಬರು ಮಾತ್ರ ಬದುಕುಳಿದೆವು ಎಂದು ರೇಖಾ ನಾಯ್ಕ ಹೇಳಿಕೆ ನೀಡಿದ್ದಾರೆ ಎಂದು ಎಸ್‌ಪಿ ನಿಶಾ ಜೇಮ್ಸ್‌ ತಿಳಿಸಿದರು

ಘಟನೆ ವಿವರ

ನಿನ್ನೆ ಮುಂಜಾನೆ 4 ರಿಂದ 5 ಗಂಟೆ ಸಮಯದಲ್ಲಿ ಮುಸುಕುದಾರಿಯೊಬ್ಬ ತಾಯಿ ರೇಖಾ ಜೊತೆ ಮಲಗಿದ್ದ ಸಾನ್ವಿಕಾಳನ್ನು ಅಪಹರಿಸಿದ್ದು, ಮಗುವಿನ ಅಳು ಕೇಳಿ ಮಗುವಿನ ತಾಯಿ ರೇಖಾ ತನ್ನ ಇನ್ನೊಂದು ಮಗುವಿನ ಜೊತೆ ಅಪರಹಣಕಾರನನ್ನು ಬೆನ್ನತ್ತಿದ್ದಾರೆ ಎಂದು ಹೇಳಲಾಗಿತ್ತು. ನಂತರ ಅಪಹರಣಕಾರ ಮನೆಯ ಸಮೀಪದಲ್ಲಿ ಇದ್ದ ಕುಬ್ಜಾ ನದಿಯಲ್ಲಿ ಇಳಿದು ಪರಾರಿಯಾಗಿದ್ದು, ಈ ಸಂದರ್ಭದಲ್ಲಿ ಮಗುವ ರಕ್ಷಿಸಲು ನದಿಗೆ ಇಳಿದ ರೇಖಾ ಇನ್ನೊಂದು ಮಗುವಿನ ಜೊತೆ ನದಿಯಲ್ಲಿ ಕೊಚ್ಚಿಹೋಗುವ ಸಂದರ್ಭ ಸ್ಥಳೀಯರು ಬಂದು ಇಬ್ಬರನ್ನು ರಕ್ಷಿಸಿದ್ದಾರೆ ಎಂದು ಹೇಳಲಾಗಿತ್ತು.

ಅಪಹರಣಕಾರ ಮಗು ಸಾನ್ವಿಕಾ ಳನ್ನು ನದಿ ದಾಟಿ ಹೊತ್ತೊಯ್ದಿದ್ದು ಆತನ ಜೊತೆ ಇನ್ನೊಬ್ಬ ಅಪಹರಣಕಾರ ಇದ್ದ ಎಂದು ರೇಖಾ ಪೊಲೀಸರಿಗೆ ತಿಳಿಸಿದ್ದರು.

ಅಪಹರಣದ ದೂರು ದಾಖಲಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಸ್ಥಳಕ್ಕೆ ಭೇಟಿ ನೀಡಿದ್ದರು. ಅಲ್ಲದೆ ಮಗುವಿನ ಪತ್ತೆಗಾಗಿ ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.

Facebook Comments

comments