ತಿರುವನಂತಪುರಂ ಜುಲೈ 09: ವಿವಾಹವಾಗಿ ಕೇವಲ ಎರಡು ತಿಂಗಳು ಕಳೆಯುವ ಮುನ್ನವೇ 19 ವರ್ಷದ ನವವಿವಾಹಿತೆಯೊಬ್ಬರು ತಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ಹೃದಯವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವೆಟ್ಟೂರು ನಿವಾಸಿಯಾದ ನಾಸಿಯಾ (19) ಮೃತಪಟ್ಟ ದುರ್ದೈವಿ ಮಹಿಳೆ.

ಬುಧವಾರ ವೆಟ್ಟೂರಿನಲ್ಲಿರುವ ತನ್ನ ಮನೆಯ ಕೋಣೆಯಲ್ಲಿ ನಾಸಿಯಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದನ್ನು ಗಮನಿಸಿದ ತಕ್ಷಣವೇ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಕೆಯ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರಂನ ಮಲ್ಟಿಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ದುರದೃಷ್ಟವಶಾತ್, ಗುರುವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ನಾಸಿಯಾ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಆಕೆಗೆ Food Poisoning ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದು ವೆಟ್ಟೂರಿನ ರತಿಕ್ಕಲ್ನಲ್ಲಿರುವ ತನ್ನ ಮನೆಗೆ ಮರಳಿದ್ದರು ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ನಾಸಿಯಾ ಅವರಿಗೆ ಎರಡು ತಿಂಗಳ ಹಿಂದೆಯಷ್ಟೇ ಪರವೂರಿನ ನಿವಾಸಿಯಾದ ಅನ್ಜರ್ ಎಂಬುವರೊಂದಿಗೆ ವಿವಾಹವಾಗಿತ್ತು. ಕುವೈತ್ನಲ್ಲಿ ಉದ್ಯೋಗದಲ್ಲಿರುವ ಅನ್ಜರ್, ಮದುವೆಯಾದ ಕೇವಲ ಎರಡು ವಾರಗಳಲ್ಲೇ ಮರಳಿ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಬೇಕಾಯಿತು. ಮದುವೆಯಾದ ಬೆನ್ನಲ್ಲೇ ಪತಿ ದೂರವಾದ ಕಾರಣ ನಾಸಿಯಾ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆಕೆ ತನ್ನ ಪತಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಕುಟುಂಬದವರ ಬಳಿ ಹಲವು ಬಾರಿ ಹೇಳಿಕೊಂಡಿದ್ದರು. ಇದನ್ನು ಹೊರತುಪಡಿಸಿ ದಂಪತಿಗಳ ನಡುವೆ ಯಾವುದೇ ರೀತಿಯ ಕೌಟುಂಬಿಕ ಕಲಹ ಅಥವಾ ಇತರ ಸಮಸ್ಯೆಗಳು ಇರಲಿಲ್ಲ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟಪಡಿಸಿದ್ದಾರೆ.