ಆಲಪ್ಪುಳ ಎಪ್ರಿಲ್ 25: ಕೇರಳ ರಾಜ್ಯದಲ್ಲಿ ಹಾವಿನ ಕಡಿತದ ಪ್ರಕರಣಗಳು ಮಿತಿಮೀರುತ್ತಿದ್ದು, ಶುಕ್ರವಾರ ತಡರಾತ್ರಿ ಅಲಪ್ಪುಳದಲ್ಲಿ 65 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಕಳೆದ ಒಂದು ವಾರದಲ್ಲಿ ಹಾವಿನ ಕಡಿತದಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ನೆಡುಮುಡಿ ನಿವಾಸಿ ಇಂದಿರಾ (65) ಮೃತ ದುರ್ದೈವಿ. ಶುಕ್ರವಾರ ಸಂಜೆ ಮನೆಯ ಸ್ನಾನಗೃಹದ ಬಳಿ ಹೋಗಿದ್ದಾಗ ಇಂದಿರಾ ಅವರಿಗೆ ನಾಗರಹಾವು ಕಚ್ಚಿದೆ. ತಕ್ಷಣ ಅವರನ್ನು ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. “ನಾಗರಹಾವು ಕಚ್ಚಿದೆ ಎಂದು ಅವರು ಆಸ್ಪತ್ರೆಗೆ ಬಂದಾಗ ಹೇಳಿದ್ದರು, ಆದರೆ ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಬಿದ್ದರು. ವಿಷ ನಿರೋಧಕ ಔಷಧ ನೀಡಿ ಐಸಿಯುನಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ,” ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಪಾಲಕ್ಕಾಡ್ನ ನೆನ್ಮಾರದಲ್ಲೂ ಮತ್ತೊಂದು ಹಾವಿನ ಕಡಿತದ ಪ್ರಕರಣ ವರದಿಯಾಗಿದ್ದು, ಅದೃಷ್ಟವಶಾತ್ ಸಂತ್ರಸ್ತನ ಸ್ಥಿತಿ ಸ್ಥಿರವಾಗಿದೆ. ಗುರುವಾರವಷ್ಟೇ ಕಾಯಂಕುಲಂನಲ್ಲಿ ಸೆಲೀನಾ ಎಂಬುವವರು ಶಂಕಿತ ಹಾವಿನ ಕಡಿತದಿಂದ ಮೃತಪಟ್ಟಿದ್ದರು. ಸತತವಾಗಿ ಸಂಭವಿಸುತ್ತಿರುವ ಈ ಸಾವುಗಳು ಕೇರಳದ ಜನರಲ್ಲಿ ತೀವ್ರ ಭೀತಿ ಹುಟ್ಟಿಸಿವೆ.