ಕೇರಳದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಎಫ್ಐಆರ್ ದಾಖಲು

ಮಂಗಳೂರು ಜನವರಿ 24: ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿದ್ದ ಹಿಂದೂ ಕುಟುಂಬಗಳಿಗೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಕೇರಳ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಕೇರಳದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಬುಧವಾರ ಟ್ವೀಟ್ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ‘ಕೇರಳ ಸರ್ಕಾರ ಮತ್ತೊಂದು ಕಾಶ್ಮೀರವಾಗುವುದರತ್ತ ಸಣ್ಣ ಸಣ್ಣ ಹೆಜ್ಜೆಗಳನ್ನು ಇಡುತ್ತಿದೆ. ಮಲ್ಲಪುರಂ ಜಿಲ್ಲೆಯ ಕುಟ್ಟಿಪುರಮ್‌ ಪಂಚಾಯಿತಿಯ ಹಿಂದೂ ಕುಟುಂಬಗಳು ಸಿಎಎ ಬೆಂಬಲಿಸಿದವು ಎಂಬ ಕಾರಣಕ್ಕೆ ಅವರಿಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ದೇವರ ಸ್ವಂತ ನಾಡಿನ ಶಾಂತಿಧೂತರ ಈ ಅಸಹಿಷ್ಣುತೆಯನ್ನು ಮಾಧ್ಯಮಗಳು ಪ್ರಸಾರ ಮಾಡಬಲ್ಲವೇ? ಎಂದು ಅವರು ಪ್ರಶ್ನೆ ಮಾಡಿದ್ದರು.

ನಿನ್ನೆ ಕೇರಳದಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದವು. ಆದರೆ ಶೋಭಾ ಕರಂದ್ಲಾಜೆ ಅವರ ಟ್ವೀಟ್‌ ಕುರಿತು ಮಲ್ಲಪುರಂ ನಿವಾಸಿ, ಸುಪ್ರೀಂ ಕೋರ್ಟ್‌ನ ವಕೀಲ ಸುಭಾಷ್‌ ಚಂದ್ರನ್‌ ಕೆ.ಆರ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇತ್ತ ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಲೇ ಇತ್ತ ಕೇರಳ ಸರಕಾರದ ವಿರುದ್ಧ ಶೋಭಾ ಕರಂದ್ಲಾಜೆ ಹರಿಹಾಯ್ದಿದ್ದಾರೆ. ಮತ್ತೆ ಟ್ವೀಟ್ ಮಾಡಿರುವ ‘ಚೆರುಕುನ್ನು ಗ್ರಾಮದ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳದ ಕೇರಳ ಸರ್ಕಾರ, ನನ್ನ ವಿರುದ್ಧ ಪ್ರಕರಣ ದಾಖಲಿಸಿದೆ. ಪೂರ್ವಾಗ್ರಹ ಪೀಡಿತವಾದ ಎಡ ಸರ್ಕಾರದ ಒತ್ತಡ ತಂತ್ರದ ವಿರುದ್ಧ ಒಂದಾಗಲು ಇದು ಸಕಾಲ,’ ಎಂದು ಅವರು ಬರೆದುಕೊಂಡಿದ್ದಾರೆ.

‘ಲೋಕಸಭೆಯ ಎರಡೂ ಸದನಗಳಲ್ಲಿ ಸಿಎಎ ಅಂಗೀಕಾರವಾಗಿದೆ. ಸಿಎಎಯನ್ನು ಬೆಂಬಲಿಸುತ್ತಿರುವವರಿಗೆ ವ್ಯವಹಾರ, ಕೆಲಸ, ಮೂಲಸೌಕರ್ಯಗಳನ್ನು ನಿರಾಕರಿಸಲಾಗುತ್ತಿದೆ. ಕೇರಳದಲ್ಲಿರುವ ಎಡ ಸರ್ಕಾರ ಇದೆಲ್ಲದರ ಬಗ್ಗೆ ಜಾಣ ಕುರುಡಾಗಿದೆ. ಆದರೆ, ಇದರ ವಿರುದ್ಧ ಮಾತನಾಡಿದ ನನ್ನ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments

comments