ದೇಶದ ಕೊರೊನಾ ರೆಡ್ ಜೋನ್ ಕೇರಳ – ರಾಜ್ಯಕ್ಕೆ ಕೇರಳಿಗರನ್ನು ಒಳಕ್ಕೆ ಬಿಡುವ ಪ್ರಶ್ನೆಯೇ ಇಲ್ಲ – ಶೋಭಾ ಕರಂದ್ಲಾಜೆ

ಉಡುಪಿ ಎಪ್ರಿಲ್ 5: ಪಕ್ಕದ ಕಾಸರಗೋಡು ಜಿಲ್ಲೆ ದೇಶದಲ್ಲೇ ಕೊರೊನಾದ ರೆಡ್ ಜೋನ್ ಏರಿಯಾಗಿ ಮಾರ್ಪಟ್ಟಿದೆ. ಕೇರಳದವರು ನಮ್ಮ ರಾಜ್ಯಕ್ಕೆ ಬಂದು ಕೊರೊನಾ ಹಬ್ಬಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಸರಗೋಡಿಗೆ ಚಿಕ್ಕಮಗಳೂರಿನಿಂದ ತರಕಾರಿ ರವಾನೆ ಮಾಡಿದ್ದೇವೆ. ಮಾನವೀಯತೆ ವಿಚಾರದಲ್ಲಿ ನಾವು ಹಿಂದೆ ಮುಂದೆ ನೋಡುವುದಿಲ್ಲ. ಅಗತ್ಯ ಸೇವೆ ಮತ್ತು ವೈದ್ಯಕೀಯ ಸೇವೆ ನೀಡಲು ಸಿದ್ಧವಿದೆ. ವೈದ್ಯರು, ನರ್ಸ್‍ಗಳು ಅಲ್ಲಿಗೆ ಕಳುಹಿಸುತ್ತೇವೆ.

ಆದರೆ ಕೇರಳ ಕಾಸರಗೋಡಿನ ಜನ ಕರ್ನಾಟಕಕ್ಕೆ ಬರಬಾರದು. ನಾವು ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ ಎಂದು ಹೇಳಿದರು. ಇಲ್ಲಿನ ವಾಹನ ಹೋಗುವ ಬರುವ ಸಂದರ್ಭದಲ್ಲಿ ಕ್ರಿಮಿನಾಶಕ ಸಿಂಪಡಣೆ ಆಗತ್ಯ ಎಂದು ತಿಳಿಸಿದರು.

ದೇಶದಲ್ಲಿ ಕೊರೊನಾ ಜಿಹಾದ್ ನಡೆಯುತ್ತಿದೆ. ಸರ್ಕಾರಕ್ಕೆ ವೈದ್ಯರಿಗೆ ಸಹಕಾರ ನೀಡದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ. ಕೊರೊನಾ ರೋಗಿ ವೈದ್ಯರನ್ನು ತಬ್ಬಿಕೊಳ್ಳುತ್ತಾರೆ. ನರ್ಸ್ ಗಳಿಗೆ ರೋಗ ಹಬ್ಬಿಸುವ ಧಮ್ಕಿ ಹಾಕಿದ್ದಾರೆ. ಇದು ಭಯೋತ್ಪಾದನೆಯ ಮುಂದುವರಿದ ಭಾಗ. ಕ್ವಾರಂಟೈನ್‍ನಲ್ಲಿ ಇರುವ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಕಠಿಣವಾದ ಕಾನೂನು ದೇಶದಲ್ಲಿ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.