Connect with us

LATEST NEWS

ಕೇಂದ್ರ ಸರಕಾರದ ಆದೇಶಕ್ಕೆ ಕ್ಯಾರೆ ಅನ್ನದ ಕೇರಳ – ಬಿಜೆಪಿಯಿಂದ ಪ್ರತಿಭಟನೆ

ಮಂಗಳೂರು ಅಗಸ್ಟ್ 25: ದೇಶದೆಲ್ಲೆಡೆ ಕೊರೊನಾ ಅನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದು, ಎಲ್ಲಾ ವ್ಯವಹಾರಗಳಿಗೂ ಬಹುತೇಕ ಅನುಮತಿಯನ್ನು ನೀಡಲಾಗಿದೆ. ಅಲ್ಲದೆ ರಾಜ್ಯ ಸರಕಾರಗಳು ತಮ್ಮ ತಮ್ಮ ಗಡಿಯನ್ನು ವಾಹನಗಳ ಹಾಗೂ ಜನರ ಪ್ರಯಾಣಕ್ಕೆ ಮುಕ್ತಗೊಳಿಸಬೇಕು ಎನ್ನುವ ಆದೇಶವನ್ನೂ ಕೇಂದ್ರ ಸರಕಾರ ಈಗಾಗಲೇ ಹೊರಡಿಸಿದೆ. ಆದರೆ ಕೇರಳ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಹೆದ್ದಾರಿಗಳನ್ನು ತೆರೆಯಲು ಕೇರಳ ಸರಕಾರ ಮೀನ ಮೇಷ ಎಣಿಸುತ್ತಿದೆ. ಕರ್ನಾಟಕಕ್ಕೆ ಬಂದಲ್ಲಿ ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತದೆ ಎನ್ನುವ ಮೊಂಡು ವಾದವನ್ನು ಕೇರಳ ಸರಕಾರ ಮಾಡುತ್ತಿದೆ ಎನ್ನುವ ಆರೋಪ ಇದೀಗ ಕೇಳಿ ಬರಲಾರಂಭಿಸಿದೆ.


ಕೊರೊನಾ ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರಗಳು ತಮ್ಮ ತಮ್ಮ ಗಡಿಗಳನ್ನು ಮುಚ್ಚಿ ಸೋಂಕು ವ್ಯಾಪಿಸುವುದನ್ನು ತಡೆಯಬೇಕು ಎನ್ನುವ ನಿರ್ದೇಶನವನ್ನೂ ನೀಡಿತ್ತು. ಆ ಬಳಿಕ ಇದೀಗ ದೇಶದಲ್ಲಿ ಅನ್ ಲಾಕ್ ಡೌನ್ ಜಾರಿಯಲ್ಲಿದ್ದು, ಎಲ್ಲಾ ವ್ಯವಹಾರಗಳಿಗೆ ಮುಕ್ತ ಅವಕಾಶವನ್ನು ನೀಡಲಾಗಿದೆ. ಎಲ್ಲಾ ರಾಜ್ಯ ಸರಕಾರಗಳು ಮುಚ್ಚಿದ್ದ ತಮ್ಮ ತಮ್ಮ ಗಡಿಗಳನ್ನು ತೆರವುಗೊಳಿಸಿ ವಾಹನಗಳ ಹಾಗೂ ಜನರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವ ಆದೇಶವನ್ನೂ ಹೊರಡಿಸಲಾಗಿದೆ.

ಆದರೆ ಈ ಆದೇಶ ಕೇರಳ ಸರಕಾರಕ್ಕೆ ಅನ್ವಯಿಸುವುದಿಲ್ಲವೇ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಕೇರಳ ಹಾಗೂ ಕರ್ನಾಟಕವನ್ನು ಸಂಪರ್ಕಿಸುವ ಎಲ್ಲಾ ಹೆದ್ದಾರಿಗಳನ್ನೂ ಕೇರಳ ಸರಕಾರ ಇಂದಿಗೂ ಮುಕ್ತಗೊಳಿಸಿಲ್ಲ. ಕೇರಳದಿಂದ ಕರ್ನಾಟಕಕ್ಕೆ ಬರುವ ಜನ ಕಡ್ಡಾಯವಾಗಿ 14 ದಿನಗಳ ಕ್ವಾರೆಂಟೈನ್ ನಲ್ಲಿರಬೇಕು ಎನ್ನುವ ನಿಯಮವನ್ನು ಈಗಲೂ ಜಾರಿಯಲ್ಲಿರಿಸಿದೆ. ಕೇರಳ ಸರಕಾರದ ಈ ರೀತಿಯ ವರ್ತನೆಯನ್ನು ವಿರೋಧಿಸಿ ಇದೀಗ ಕೇರಳ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದೆ. ಕರ್ನಾಟಕಕ್ಕೆ ಜನ ಹೋದಲ್ಲಿ ಕೇರಳದಲ್ಲಿ ಕೊರೊನಾ ಹೆಚ್ಚಾಗುತ್ತದೆ ಎನ್ನುವ ಮೊಂಡು ವಾದವನ್ನು ಕೇರಳ ಸರಕಾರ ಇದೀಗ ನೀಡಲಾರಂಭಿಸಿದೆ. ಕೇರಳ ಹಾಗೂ ದಕ್ಷಿಣಕನ್ನಡ ಗಡಿಭಾಗವಾದ ಮಂಗಳೂರು ಹೊರವಲಯದ ತಲಪಾಡಿ ಮೂಲಕ ದಿನಕ್ಕೆ 5 ಸಾವಿರಕ್ಕೂ ಮಿಕ್ಕಿದ ಗಡಿನಾಡ ಕನ್ನಡಿಗರು ಮಂಗಳೂರಿಗೆ ಉದ್ಯೋಗ ಹಾಗೂ ಶಿಕ್ಷಣದ ನಿಮಿತ್ತ ಭೇಟಿ ನೀಡುತ್ತಾರೆ. ಗಡಿಯನ್ನು ಬಂದ್ ಮಾಡಿರುವುದರಿಂದ ಗಡಿನಾಡ ಕನ್ನಡಿಗರಿಗೆ ಉದ್ಯೋಗಕ್ಕೆ ತೆರಳಲು ತೊಂದರೆಯಾಗುತ್ತಿದೆ. ಆದರೆ ಕೇರಳ ಸರಕಾರ ಗಡಿನಾಡ ಕನ್ನಡಿಗರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪವೂ ಇದೀಗ ಕೇಳಿ ಬರಲಾರಂಭಿಸಿದೆ.

ಕೇರಳ- ದಕ್ಷಿಣಕನ್ನಡ ಗಡಿಯನ್ನು ತೆರೆಯದಿರುವುದರ ಹಿಂದೆ ಕಾಸರಗೋಡು ಜಿಲ್ಲಾಧಿಕಾರಿಯ ಕರ್ನಾಟಕದ ಮೇಲಿನ ವೈಷ್ಯಮ್ಯವೂ ಕಾರಣ ಎನ್ನುವ ಆರೋಪವೂ ಇದೆ. ಈ ಹಿಂದೆ ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲಾಡಳಿತ ಜಿಲ್ಲೆಯ ಎಲ್ಲಾ ಗಡಿಗಳನ್ನು ಮುಚ್ಚಿ ಕೇರಳದಿಂದ ಜನ ಜಿಲ್ಲೆಗೆ ಆಗಮಿಸದಂತೆ ತಡೆದಿದ್ದರು. ಇದನ್ನೇ ನೆಪವಾಗಿಸಿಕೊಂಡು ಕಾಸರಗೋಡಿನ ಜಿಲ್ಲಾಧಿಕಾರಿ ಉದ್ಧೇಶಪೂರ್ವಕವಾಗಿಯೇ ಹೆದ್ದಾರಿಯನ್ನು ಬಂದ್ ಮಾಡಿದ್ದಾರೆ ಎನ್ನುವ ಆರೋಪವನ್ನು ಕೇರಳ ಬಿಜೆಪಿ ಮಾಡಲಾರಂಭಿಸಿದೆ. ಅಲ್ಲದೆ ಹೆದ್ದಾರಿಯನ್ನು ಬ್ಯಾರಿಕೇಟ್ ಅಳವಡಿಸಿ ಬಂದ್ ಮಾಡುವಂತಿಲ್ಲ ಎನ್ನುವ ಹೈಕೋರ್ಟ್ ನಿರ್ದೇಶನವನ್ನೂ ಕೇರಳ ಸರಕಾರ ಪಾಲಿಸುತ್ತಿಲ್ಲ ಎನ್ನುವ ಆರೋಪವೂ ಇದೆ.


ಒಟ್ಟಾರೆಯಾಗಿ ಕೇಂದ್ರ ಸರಕಾರ ಆದೇಶ ಕೇಳದ ರಾಜ್ಯ ಸರಕಾರಗಳು ಹಾಗೂ ರಾಜ್ಯ ಸರಕಾರದ ಆದೇಶ ಕೇಳ ಜಿಲ್ಲಾಧಿಕಾರಿಗಳು ಆದರೆ ಜಿಲ್ಲಾಧಿಕಾರಿಗಳ ಆದೇಶ ಮಾತ್ರ ಜನಸಾಮಾನ್ಯ ಕೇಳಬೇಕಾಗಿದೆ.

Facebook Comments

comments