LATEST NEWS
ವರದಕ್ಷಿಣೆ ವಿರುದ್ಧ ಹೋರಾಟ: ಕೇರಳ ರಾಜ್ಯಪಾಲರ ‘ಒಂದು ದಿನದ ಉಪವಾಸ’

ತಿರುವನಂತಪುರಂ, ಜುಲೈ 13: ಸಾಮಾಜಿಕ ಪಿಡುಗಾಗಿರುವ ವರದಕ್ಷಿಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಬುಧವಾರ ಇಲ್ಲಿ ನಡೆಯುವ ‘ವರದಕ್ಷಿಣೆ ವಿರೋಧಿ ಉಪವಾಸ ದಿನ’ದಲ್ಲಿ ಪಾಲ್ಗೊಳ್ಳಲಿದ್ದಾರೆ.
ಗಾಂಧಿ ಸ್ಮಾರಕ ನಿಧಿ ಮತ್ತು ಇತರ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿನ ಗಾಂಧಿ ಭವನದಲ್ಲಿ ಮುಂಜಾನೆಯಿಂದ ಸಂಜೆವರೆಗೆ ನಡೆಯಲಿರುವ ಒಂದು ದಿನದ ಉಪವಾಸ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸಲಿದ್ದಾರೆ. ಗಾಂಧಿ ವಿಚಾರಧಾರೆಗಳನ್ನು ಅನುಸರಿಸುವ ರಾಜ್ಯವ ವಿವಿಧ ಸಂಘಟನೆಗಳು ಕರೆ ನೀಡಿದ ‘ವರದಕ್ಷಿಣೆ ವಿರೋಧಿ ಉಪವಾಸ ದಿನ’ದಲ್ಲಿ ಪಾಲ್ಗೊಳ್ಳುವ ರಾಜ್ಯಪಾಲರು, ಸಂಜೆ ನಡೆಯುವ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.

ವರದಕ್ಷಿಣೆಯಿಂದ ಸಮಾಜದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕೊನೆಗೊಳಿಸುವ ಹಾಗೂ ಕೇರಳ, ಮಹಿಳೆಯರಿಗೆ ಸುರಕ್ಷಿತ ರಾಜ್ಯ ಎಂಬ ಭಾವನೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ವರದಕ್ಷಿಣೆ ವಿರುದ್ಧ ಜಾಗೃತಿ ಮೂಡಿಸಲು ಯಾವುದೇ ‘ಸಂಘಟಿತ’ ಸ್ವಯಂಪ್ರೇರಿತ ಚಳವಳಿಯಲ್ಲಿ ಪಾಲ್ಗೊಳ್ಳುವುದಾಗಿ ಕಳೆದ ತಿಂಗಳು ರಾಜ್ಯಪಾಲರು ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದರು.