ತಿರುವನಂತಪುರಂ, ಜನವರಿ 11: ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳ್ಳತನ ಪ್ರಕರಣದ ಆರೋಪಿಗಳನ್ನು ಆಡಳಿತರೂಢ ಎಲ್ಡಿಎಫ್ ಸರ್ಕಾರ ರಕ್ಷಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾನುವಾರ ಆರೋಪಿಸಿದ್ದಾರೆ.

ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ನಗರ ನಿಗಮದ ಮೇಲೆ ಹಿಡಿತ ಸಾಧಿಸಿದ ಬಳಿಕ ಮೊದಲ ಬಾರಿಗೆ ತಿರುವನಂತಪುರಂಗೆ ಆಗಮಿಸಿದ ಷಾ, ಹೊಸದಾಗಿ ಆಯ್ಕೆಯಾದ ಬಿಜೆಪಿ ಪ್ರತಿನಿಧಿಗಳನ್ನು ಉದ್ದೇಶಿಸಿ ಮತ್ತು ಪಕ್ಷದ ಮಿಷನ್ 2026 ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದದಿಂದ ಶಬರಿಮಲೆ ಚಿನ್ನ ಕಳುವಿನ ಸತ್ಯ ಹೊರಬರುವುದಿಲ್ಲ, ಆದ್ದರಿಂದ ಪ್ರಕರಣವನ್ನು ಸ್ವತಂತ್ರ ಮತ್ತು ತಟಸ್ಥ ತನಿಖಾ ಸಂಸ್ಥೆಗೆ ವಹಿಸುವುದು ಇಂದಿನ ಅಗತ್ಯವಾಗಿದೆ. ಇದು ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ, ದೇಶಾದ್ಯಂತ ಭಕ್ತರ ಮೇಲೆ ತೀವ್ರ ಪರಿಣಾಮ ಬೀರಿದೆ. ಪ್ರಮುಖ ಯಾತ್ರಾ ಸ್ಥಳದಲ್ಲಿನ ಬೆಲೆಬಾಳುವ ವಸ್ತುಗಳನ್ನು ರಕ್ಷಿಸುವಲ್ಲಿ ವಿಫಲವಾದ ಸರ್ಕಾರ, ಜನರ ಧಾರ್ಮಿಕ ನಂಬಿಕೆಯನ್ನು ರಕ್ಷಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪ್ರಕರಣದ ಎಫ್‌ಐಆರ್ ಆರೋಪಿಗಳಿಗೆ ಅನುಕೂಲಕರವಾಗುವ ರೀತಿಯಲ್ಲಿ ರಚಿಸಲಾಗಿದ್ದು, ಎಲ್‌ಡಿಎಫ್‌ಗೆ ಸಂಬಂಧಿಸಿದ ಇಬ್ಬರು ವ್ಯಕ್ತಿಗಳ ಬಗ್ಗೆ ಅನುಮಾನವಿದ್ದು, ಇಂತಹ ಪರಿಸ್ಥಿತಿಯಲ್ಲಿ ನ್ಯಾಯಯುತ ತನಿಖೆ ನಡೆಯುವುದು ಅಸಾಧ್ಯ. ಆದ್ದರಿಂದ ಬಿಜೆಪಿ ಪ್ರತಿಭಟನೆಗಳು ಮತ್ತು ಮನೆ ಮನೆಗೆ ಜಾಗೃತಿ ಅಭಿಯಾನಗಳನ್ನು ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ತಿರುವನಂತಪುರಂನಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಷಾ, ಕೇರಳದಲ್ಲಿ ಸಾಂಪ್ರದಾಯಿಕ ರಾಜಕೀಯ ರಂಗಗಳಿಗೆ ಬಿಜೆಪಿ ಏಕೈಕ ವಿಶ್ವಾಸಾರ್ಹ ಪರ್ಯಾಯವಾಗಿ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದ್ದಾರೆ.

ನಮ್ಮ ಈ ಕೇರಳ ಭೇಟಿ ವೈಯಕ್ತಿಕ ಸಂಕಲ್ಪದ ನೆರವೇರಿಕೆಯಾಗಿದೆ. ಅಲ್ಲದೆ, ಕಾರ್ಪೊರೇಷನ್ ಚುನಾವಣೆಯ ಸಮಯದಲ್ಲಿ ತಿರುವನಂತಪುರದ ಜನರು ಬಿಜೆಪಿಯ ಮೇಲೆ ತಮ್ಮ ನಂಬಿಕೆಯನ್ನು ತೋರಿಸಿದ್ದಾರೆ. ಪದ್ಮನಾಭಸ್ವಾಮಿ ದೇವರಿಗೆ ನನ್ನ ಪ್ರಾರ್ಥನೆ ಮತ್ತು ಕೃತಜ್ಞತೆಯನ್ನು ಸಲ್ಲಿಸಲು ನಾನು ಇಲ್ಲಿಗೆ ಬರುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆ, ಅದರಂತೆ ಬಂದಿದ್ದೇನೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಸಾಧನೆಯು ದಕ್ಷಿಣದ ಆಳದಲ್ಲಿ ಕಮಲ ಅರಳುತ್ತಿದೆ ಎಂಬುದರ ಸ್ಪಷ್ಟ ಸಂಕೇತವಾಗಿದೆ ಎಂದು ಷಾ ತಿಳಿಸಿದ್ದಾರೆ.

Share Information