ಪಟ್ಟಣಂತಿಟ್ಟ ಫೆಬ್ರವರಿ 16: ಅಪಘಾತದಲ್ಲಿ ಮಿದುಳು ನಿಷ್ಕ್ರೀಯಗೊಂಡು, ದೇ್ಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದ್ದ 10 ತಿಂಗಳ ಮಗು ಶೆರೀನ್ ಅಬ್ರಹಾಂ ಅಂತ್ಯಸಂಸ್ಕಾರವನ್ನು ಕೇರಳ ಸರಕಾರ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಿದೆ. ಸಾವಿರಾರು ಜನಸಾಗರದ ನಡುವೆ ಭಾನುವಾರ ಸಂಜೆ ನೆಡುಂಗಡಪಲ್ಲಿ ಸೆಂಟ್ ಥಾಮಸ್ ಸಿಎಸ್‍ಐ ಚರ್ಚ್‍ನಲ್ಲಿ ಅಂತ್ಯಸಂಸ್ಕಾರವನ್ನು ನಡೆಸಲಾಗಿದೆ.

ಪತ್ತನಂತಿಟ್ಟ ಜಿಲ್ಲೆಯ ಮಲ್ಲಪಳ್ಳಿಯಲ್ಲಿ ಮಗು ಅಲಿನ್ ಶೆರಿನ್ ಅಬ್ರಹಾಂ ಅಂತ್ಯ ಸಂಸ್ಕಾರ ನಡೆದಿದ್ದು, ಮಂತ್ರಿಗಳ ಜೊತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಹಲವು ಜನರು ಭಾಗವಹಿಸಿದ್ದರು. ರಾಜ್ಯ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಸುರೇಶ್ ಗೋಪಿ, ರಾಜ್ಯ ಸರ್ಕಾರದ ಪರವಾಗಿ ಸಚಿವೆ ವೀಣಾ ಜಾರ್ಜ್ ಅವರು ಮಗುವಿನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಸಚಿವರಾದ ವಿ.ಎನ್. ವಾಸವನ್, ಸಾಜಿ ಚೆರಿಯನ್, ರೋಶಿ ಆಗಸ್ಟೀನ್, ಕಾಂಗ್ರೆಸ್ ನಾಯಕರಾದ ಪಿ.ಎಸ್. ವಿಷ್ಣುನಾದ್, ಶಾಸಕರು ಕೂಡ ಭಾಗಿಯಾಗಿದ್ದರು.
ಅಲ್ಲದೇ, ಅಲಿನ್ ಅಂಗಾಂಗ ಪಡೆದಿದ್ದ ಮಕ್ಕಳ ಪೈಕಿ ಒಂದು ಮಗುವಿನ ಕುಟುಂಬಸ್ಥರು ಕೂಡ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ಕೊಟ್ಟಾಯಂನಲ್ಲಿ ಫೆ.5ರಂದು ಪೋಷಕರು ಹಾಗೂ ಸಂಬಂಧಿಕರ ಜತೆಗೆ ಈ ಮಗು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಮಗುವಿಗೆ ತೀವ್ರ ಗಾಯಗಳಾಗಿದ್ದವು.

ಪುಟ್ಟ ಮಗುವಿನ ಅಂಗಾಂಗ ದಾನಕ್ಕೆ ಕಾರಣರಾದ ತಂದೆ ಅರುಣ್ ಅಬ್ರಹಾಂ ಮತ್ತು ಶೆರೀನ್ ಆ್ಯನ್ ಜಾನ್ ಅವರ ಮಾನವೀಯತೆಯನ್ನು ಗೌರವಿಸುವ ಸಲುವಾಗಿ ಮಲ್ಲಪಳ್ಳಿ ಬಳಿಯ ನೆಡುಂಗದಪಳ್ಳಿಯ ವೆಲುಮನ್ನಿಲಿಗೆ ಜನಸಾಗರವೇ ಭಾನುವಾರ ಬೆಳಿಗ್ಗೆಯಿಂದ ಹರಿದಿತ್ತು. ಬೆಳಿಗ್ಗೆ 7.45ರ ವೇಳೆಗೆ ಆಲಿನ್ ಮೃತದೇಹವನ್ನು ತರಲಾಗಿತ್ತು. ಮಲ್ಲಿಗೆಯಿಂದ ಸುತ್ತಲಾಗಿದ್ದ ಪುಟ್ಟ ಮೃತದೇಹಪೆಟ್ಟಿಗೆಯಲ್ಲಿ ಪುಟ್ಟ ದಾನಿಯ ಮೃತದೇಹವನ್ನು ಇರಿಸಲಾಗಿತ್ತು. ಶೋಕಸಾಗರದ ನಡುವೆ ಪೋಷಕರು ಹಾಗೂ ಬಂಧುಗಳು ಮೃತದೇಹಪೆಟ್ಟಿಗೆಯ ಪಕ್ಕ ಇದ್ದರು.
ಸಚಿವರಾದ ವೀಣಾ ಜಾರ್ಜ್, ವಿ.ಎನ್.ವಾಸವನ್, ಸಂಸದ ಸುರೇಶ್ ಗೋಪಿ ಹಾಗೂ ಹಲವು ಮಂದಿ ಜನಪ್ರತಿನಿಧಿಗಳು ಮನೆಗೆ ಭೇಟಿ ನೀಡಿ ಪುಟ್ಟ ಆತ್ಮಕ್ಕೆ ಶಾಂತಿ ಕೋರಿದರು. ಪೋಷಕರ ನಿರ್ಧಾರದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದು ರಾಜ್ಯದ ಮೂಲೆಮೂಲೆಗಳಿಂದ ಜನ ಆಗಮಿಸಿ ಪುಟ್ಟ ಮಗುವಿಗೆ ಅಂತಿಮ ನಮನ ಸಲ್ಲಿಸಿದರು.



