ಮಂಜೇಶ್ವರ ಮಾರ್ಚ್ 26: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳ ವಿಭಜನೆಯ ಭೀತಿ ಹಾಗೂ ಮುಸ್ಲಿಂ ಸಂಘಟನೆಗಳ ತೀವ್ರ ಒತ್ತಡಕ್ಕೆ ಮಣಿದಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ), ಗುರುವಾರ ತನ್ನ ಅಭ್ಯರ್ಥಿಯನ್ನು ಕಣದಿಂದ ಹಿಂತೆಗೆದುಕೊಂಡಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಯುಡಿಎಫ್ ಪಾಳಯದಲ್ಲಿದ್ದ ಆತಂಕ ತುಸು ಕಡಿಮೆಯಾದಂತಾಗಿದೆ.

ಗುರುವಾರ ಬೆಳಿಗ್ಗೆ ಉಪ್ಪಳದಲ್ಲಿ ನಡೆದ ಎಸ್ಡಿಪಿಐ ಜಿಲ್ಲಾ ಸಮಿತಿಯ ತುರ್ತು ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆ.ಎಂ. ಅವರು ಅತೃಪ್ತಿಯ ನಡುವೆಯೇ ತಮ್ಮ ನಾಮಪತ್ರವನ್ನು ಹಿಂಪಡೆದರು.
ಆರಂಭದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರಕ್ಕೆ ಅಂಟಿಕೊಂಡಿದ್ದ ಎಸ್ಡಿಪಿಐ ವಿರುದ್ಧ ಯುಡಿಎಫ್ ಮತ್ತು ವಿವಿಧ ಧಾರ್ಮಿಕ ಸಂಘಟನೆಗಳು ತೀವ್ರ ವೀರೋಧ ವ್ಯಕ್ತಪಡಿಸಿದ್ದವು. ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SKSSF) ನಂತಹ ಪ್ರಭಾವಿ ಸಂಘಟನೆಗಳು ಈ ನಡೆಯನ್ನು ‘ಅನುಮಾನಾಸ್ಪದ’ ಎಂದು ಕರೆದಿದ್ದವು. “ಜಾತ್ಯತೀತ ಮತಗಳು ವಿಭಜನೆಯಾದರೆ ಅದು ನೇರವಾಗಿ ಬಿಜೆಪಿಗೆ ಲಾಭವಾಗಲಿದೆ” ಎಂದು ಹಿರಿಯ ಸಮಸ್ತ ನಾಯಕ ನಜರ್ ಫೈಜಿ ಕೂಡತೈ ಎಚ್ಚರಿಸಿದ್ದರು. ಈ ಎಲ್ಲ ಬೆಳವಣಿಗೆಗಳು ಪಕ್ಷದ ಮೇಲೆ ತೀವ್ರ ಒತ್ತಡ ಹೇರಿದ್ದವು.
ಯುಡಿಎಫ್ ಅಭ್ಯರ್ಥಿ, ಐಯುಎಂಎಲ್ನ ಎ.ಕೆ.ಎಂ. ಅಶ್ರಫ್ ಮತ್ತು ಎಸ್ಡಿಪಿಐ ಅಭ್ಯರ್ಥಿ ಅಶ್ರಫ್ ಕೆ.ಎಂ. ಅವರ ಹೆಸರುಗಳು ಒಂದೇ ಆಗಿರುವುದು ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಮತದಾರರನ್ನು ಹಾದಿ ತಪ್ಪಿಸಲು ಮತ್ತು ಮತಗಳನ್ನು ವಿಭಜಿಸಲು ಎಸ್ಡಿಪಿಐ ಉದ್ದೇಶಪೂರ್ವಕವಾಗಿ ಈ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿಂದೆ ಅಶ್ರಫ್ ಬಡಾಜೆ ಎಂಬ ಹೆಸರಿನಲ್ಲಿ ಸ್ಪರ್ಧಿಸುತ್ತಿದ್ದ ಅಭ್ಯರ್ಥಿಯನ್ನು ಈಗ ಕೇವಲ ಅಶ್ರಫ್ ಎಂದು ಕಣಕ್ಕಿಳಿಸಿದ್ದು ಈ ಅನುಮಾನಕ್ಕೆ ಪುಷ್ಟಿ ನೀಡಿತ್ತು. ಎರಡೂ ಬಾರಿ ಬಿಜೆಪಿ ನಾಯಕ ಕೆ. ಸುರೇಂದ್ರನ್ ಅವರು ಅಲ್ಪ ಅಂತರದಲ್ಲಿ ಸೋತಿದ್ದರು. ಎಸ್ಡಿಪಿಐ ಕ್ಷೇತ್ರದಲ್ಲಿ ಸುಮಾರು 6,000 ರಿಂದ 7,000 ಮತಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದ್ದು, ಈ ಮತಗಳು ವಿಭಜನೆಯಾಗಿದ್ದರೆ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿತ್ತು.
ಎಸ್ಡಿಪಿಐ ಹಿಂದೆ ಸರಿದಿರುವುದರಿಂದ ಈಗ ಕಣದಲ್ಲಿ ಯುಡಿಎಫ್ನ ಎ.ಕೆ.ಎಂ. ಅಶ್ರಫ್, ಬಿಜೆಪಿಯ ಕೆ. ಸುರೇಂದ್ರನ್ ಮತ್ತು ಎಲ್ಡಿಎಫ್ನ ಕೆ.ಆರ್. ಜಯಾನಂದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿಯ ಮತ ಹಂಚಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಇತರ ಪಕ್ಷಗಳಲ್ಲಿ ನಡುಕ ಹುಟ್ಟಿಸಿತ್ತು. ಈಗ ಎಸ್ಡಿಪಿಐ ನಿರ್ಧಾರವು ಯುಡಿಎಫ್ಗೆ ಆನೆಬಲ ತಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.