ನವದೆಹಲಿ,ಏಪ್ರಿಲ್ 12: ಬಿಹಾರದ ಕತಿಹಾರ್ ಜಿಲ್ಲೆಯ ಕೊರ್ಹಾ ಪೊಲೀಸ್ ಠಾಣೆ ವ್ಯಾಪ್ತಿಯ ಗೆರಾಬರಿ ಎಂಬಲ್ಲಿ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ರಾಷ್ಟ್ರೀಯ ಹೆದ್ದಾರಿ-31ರಲ್ಲಿ ಖಾಸಗಿ ಬಸ್, ಪಿಕಪ್ ವ್ಯಾನ್ ಹಾಗೂ ಎರಡು ಬೈಕ್ಗಳ ನಡುವೆ ಈ ಅಪಘಾತ ಸಂಭವಿಸಿದೆ.

ಪೂರ್ಣಿಯಾ ಜಿಲ್ಲೆಯ ಧಮ್ದಾಹಾ ಗ್ರಾಮದ ನಿವಾಸಿಗಳು ಜಾತ್ರೆ ಮುಗಿಸಿಕೊಂಡು ಪಿಕಪ್ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ಗೆರಾಬರಿ ಸಮೀಪದ ಹೆದ್ದಾರಿಯಲ್ಲಿ ಅತಿ ವೇಗವಾಗಿ ಬಂದ ಬಸ್, ಪಿಕಪ್ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಪಿಕಪ್ ವಾಹನ ಮತ್ತು ಬೈಕ್ಗಳು ನಜ್ಜುಗುಜ್ಜಾಗಿದ್ದು, 10 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಶನಿವಾರ ಸಂಜೆ ವೇಳೆಗೆ ಮತ್ತೆ ಮೂವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 13ಕ್ಕೆ ತಲುಪಿದೆ.

ಮೃತರಲ್ಲಿ ಬೈಕ್ ಸವಾರ ಸದಾನಂದ ಹಸ್ದಾ ಎಂಬುವವರನ್ನು ಗುರುತಿಸಲಾಗಿದ್ದು, ಉಳಿದವರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಘಟನೆಯಲ್ಲಿ ಗಾಯಗೊಂಡ 30ಕ್ಕೂ ಹೆಚ್ಚು ಜನರಿಗೆ ಪೂರ್ಣಿಯಾದ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಐವರು ಗಾಯಾಳುಗಳ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ದುರಂತದ ಕುರಿತು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ಧನವನ್ನು ಘೋಷಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಪಘಾತದ ಬೆನ್ನಲ್ಲೇ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಸ್ಸಿನ ಅತಿ ವೇಗವೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೊರ್ಹಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.