ದೇವೇಗೌಡರು ಇನ್ನಷ್ಟು ಕಾಲ ಪ್ರಧಾನಿಯಾಗಿದ್ದರೆ ಕಾಶ್ಮೀರ ಸಮಸ್ಯೆ ಬಗೆಹರಿಯುತ್ತಿತ್ತು – ಪೇಜಾವರ ಶ್ರೀ

ಉಡುಪಿ ಮೇ 14: ಮಾಜಿ ಪ್ರಧಾನಿ ದೇವೇಗೌಡರು ಇನ್ನಷ್ಟು ಕಾಲ ಪ್ರಧಾನಿಯಾಗಿದ್ದರೆ ಕಾಶ್ಮೀರ ಸಮಸ್ಯೆಗೆ ಪರಿಹಾರ ದೊರಕುತ್ತಿತ್ತು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಉಡುಪಿಯಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಟೆಂಪಲ್ ರನ್ ನ್ನು ಮುಂದುವರೆಸಿದ್ದು, ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಪೇಜಾವರ ಶ್ರೀಗಳ 88ನೇ ಜನ್ಮ ನಕ್ಷತ್ರ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪೇಜಾವರ ಶ್ರೀಗಳನ್ನು ಭೇಟಿ ಮಾಡಿದರು.

ಈ ವೇಳೆ ಪರಸ್ಪರ ಆರೋಗ್ಯ ವಿಚಾರಿಸಿಕೊಂಡು, ಗೌರವಾರ್ಪಣೆ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ರಾಷ್ಟ್ರ ರಾಜಕಾರಣದಲ್ಲಿ ದೇವೇಗೌಡರು ಅತ್ಯಂತ ಹಿರಿಯರು.

ಪ್ರಧಾನಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದರು. ದೇವೇಗೌಡರೇ ಪ್ರಧಾನಿಯಾಗಿದ್ದರೆ ಕಾಶ್ಮೀರ ಸಮಸ್ಯೆ ಬಗೆಹರಿಯಲು ಅವಕಾಶ ಇತ್ತು ಎಂದು ಹಾಡಿ ಹೊಗಳಿದರು.

ದೇವೇಗೌಡರಿಗೆ ಆಶೀರ್ವಾದ ಮಾಡಿದ್ದೇನೆ. ದೇವೇಗೌಡರಿಗೆ ಪ್ರಧಾನಿಯಾಗಿ ಅಧಿಕಾರ ನಡೆಸಲು ಕಡಿಮೆ ಅವಧಿ ಸಿಕ್ಕಿತ್ತು. ಆದರೆ ಗೌಡರ ಕುಟುಂಬದಿಂದ ಹೆಚ್ಚಿನ ರಾಷ್ಟ್ರಸೇವೆ ಆಗಲಿ. ನಾವಿಬ್ಬರೂ ರಾಜಕೀಯ ವಿಚಾರ ಮಾತನಾಡಿಲ್ಲ. ಗೌಡರು ಬನ್ನಂಜೆ ಗೋವಿಂದಾಚಾರ್ಯರ, ಮಧ್ವಾಚಾರ್ಯರ ಚರಿತ್ರೆ ಕುರಿತ ಪುಸ್ತಕ ಓದುತ್ತಿದ್ದಾರೆ ಎಂದು ತಿಳಿಸಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡರು, ಸ್ವಾಮೀಜಿಯ ಆಶೀರ್ವಾದ ಪಡೆದಿದ್ದೇನೆ, ಅವರಿಗೆ ಶುಭ ಹಾರೈಸಿದ್ದೇನೆ. ಮೂಳೂರಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದೇನೆ. ರಾಜಕೀಯವಾಗಿ ಮಾತಾಡಲ್ಲ ಎಂದು ಹೇಳಿ ತೆರಳಿದರು. ಅಲ್ಲಿಂದ ಪತ್ನಿ ಸಮೇತರಾಗಿ ಕೃಷ್ಣಮಠಕ್ಕೆ ತೆರಳಿ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿ, ಪರ್ಯಾಯ ಪಲಿಮಾರು ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.

VIDEO