ಬೆಂಗಳೂರು,ಮಾರ್ಚ್ 25:: ಕರ್ನಾಟಕದ ರೈತರ ಜೀವನಾಡಿ ಹಾಗೂ ರಾಜ್ಯದ ಹೆಮ್ಮೆಯ ಬ್ರ್ಯಾಂಡ್ ‘ನಂದಿನಿ’ಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಭರ್ಜರಿ ಸಿದ್ಧತೆ ನಡೆಸಿದೆ. ಐಪಿಎಲ್ನ ಜನಪ್ರಿಯ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಜೊತೆ ಕೆಎಂಎಫ್ ಮಹತ್ವದ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿದ್ದು, ಈ ಕುರಿತು ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.

ಆರ್ಸಿಬಿ ತಂಡಕ್ಕೆ ನಂದಿನಿ ‘ಅಧಿಕೃತ ಡೈರಿ ಪಾರ್ಟ್ನರ್’ ಆಗಿ ಕಾರ್ಯನಿರ್ವಹಿಸಲಿದೆ. ಈ ಒಂದು ವರ್ಷದ ಅವಧಿಯ ಒಪ್ಪಂದಕ್ಕಾಗಿ ಕೆಎಂಎಫ್ 4.80 ಕೋಟಿ ರೂಪಾಯಿಗಳ ಟೆಂಡರ್ ಪ್ರಾಯೋಜಕತ್ವ ನೀಡಿದೆ. ಮಾರ್ಚ್ 28 ರಂದು ನಡೆಯಲಿರುವ ಆರ್ಸಿಬಿಯ ಮೊದಲ ಪಂದ್ಯದ ದಿನದಿಂದಲೇ ಈ ಒಪ್ಪಂದ ಅಧಿಕೃತವಾಗಿ ಜಾರಿಗೆ ಬರಲಿದೆ. ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮುಲ್ನಂತಹ ಬ್ರ್ಯಾಂಡ್ಗಳಿಗೆ ಪ್ರಬಲ ಪೈಪೋಟಿ ನೀಡುವುದು ಮತ್ತು ಕನ್ನಡಿಗರ ಸ್ವಂತ ಬ್ರ್ಯಾಂಡ್ನ ಪ್ರಾಬಲ್ಯವನ್ನು ಸ್ಥಾಪಿಸುವುದು ಈ ಹೂಡಿಕೆಯ ಹಿಂದಿನ ಪ್ರಮುಖ ಉದ್ದೇಶವಾಗಿದೆ.
ಈ ವಿಶೇಷ ಒಪ್ಪಂದದ ಅಡಿಯಲ್ಲಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ದೇವದತ್ ಪಡಿಕ್ಕಲ್ ಅವರ ಭಾವಚಿತ್ರಗಳನ್ನು ನಂದಿನಿ ಉತ್ಪನ್ನಗಳ ಪ್ಯಾಕಿಂಗ್ ಮೇಲೆ ಬಳಸಲು ಅನುಮತಿ ಸಿಕ್ಕಿದೆ. ಈ ಮೂಲಕ ಯುವ ಪೀಳಿಗೆಯನ್ನು ಸೆಳೆಯಲು ಕೆಎಂಎಫ್ ಮುಂದಾಗಿದೆ. “ನಮ್ಮ ರೈತರ ಬೆವರಿನ ಫಲವಾದ ಶುದ್ಧ ಮತ್ತು ಪೌಷ್ಟಿಕಾಂಶಯುಕ್ತ ನಂದಿನಿ ಉತ್ಪನ್ನಗಳನ್ನು ಐಪಿಎಲ್ ವೇದಿಕೆಯ ಮೂಲಕ ದೇಶಾದ್ಯಂತ ಮನೆಮಾತಾಗಿಸುತ್ತೇವೆ” ಎಂದು ಬಿ. ಶಿವಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಮಧ್ಯಪ್ರಾಚ್ಯ ಯುದ್ಧದ ಪರಿಸ್ಥಿತಿಯು ನಂದಿನಿ ಉತ್ಪನ್ನಗಳ ಮಾರಾಟದ ಮೇಲೆ ಸಣ್ಣ ಮಟ್ಟದ ಪರಿಣಾಮ ಬೀರಿದೆ. ಬೆಂಗಳೂರಿನಲ್ಲಿ ಹಾಲಿನ ಮಾರಾಟದಲ್ಲಿ ದಿನವೊಂದಕ್ಕೆ ಸುಮಾರು 5 ರಿಂದ 6 ಸಾವಿರ ಲೀಟರ್ ಇಳಿಕೆಯಾಗಿದೆ. ಆದರೆ, ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ದಾಖಲೆಯ 51.26 ಲಕ್ಷ ಲೀಟರ್ ಹಾಲು ಮಾರಾಟವಾಗುವ ಮೂಲಕ ಮಾರುಕಟ್ಟೆ ಚೇತರಿಕೆ ಕಂಡಿದೆ. ದುಬೈ ಮತ್ತು ಸೌದಿ ಅರೇಬಿಯಾಕ್ಕೆ ಹಾಲಿನ ರಫ್ತು ಪ್ರಕ್ರಿಯೆ ಮುಂದುವರಿದಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಿಂದೆ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡಿ ಯಶಸ್ವಿಯಾಗಿದ್ದ ಕೆಎಂಎಫ್, ಇದೀಗ ಆರ್ಸಿಬಿ ಮೂಲಕ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ನಿರೀಕ್ಷೆಯಲ್ಲಿದೆ.