ಬೆಂಗಳೂರು, ಮಾರ್ಚ್ 25: ಎರಡನೇ ಮದುವೆಗೆ ಸಜ್ಜಾಗಿದ್ದ ವ್ಯಕ್ತಿಯ ಮದುವೆಯನ್ನು ಮೊದಲ ಪತ್ನಿ ಪೊಲೀಸರೊಂದಿಗೆ ಬಂದು ತಡೆದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಬಳಿ ನಡೆದಿದೆ.

ಆಂಧ್ರ ಪ್ರದೇಶ ಮೂಲದ ಕದಿರಿಯ ಸುರೇಶ್ ಎಂಬಾತ ಎರಡನೇ ಮದುವೆಗೆ ಸಿದ್ಧವಾಗಿದ್ದನು. ಈತನಿಗೆ ಹಲವು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯ ನಾಗಮಣಿ ಎಂಬವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ಗಂಡ-ಹೆಂಡತಿ ಕೆಲಕಾಲದಿಂದ ಬೇರ್ಪಟ್ಟಿದ್ದರು. ಈ ನಡುವೆ ಸುರೇಶ್, ಕೋಡಗುರ್ಕಿ ಗ್ರಾಮದ ಮುನೇಶ್ವರ ದೇವಾಲಯದಲ್ಲಿ ಮತ್ತೊಂದು ಮದುವೆಗೆ ಸಿದ್ಧತೆ ನಡೆಸಿದ್ದನು. ಮದುವೆ ಸಮಾರಂಭದಲ್ಲಿ ತಾಳಿ ಕಟ್ಟುವ ಕ್ಷಣದ ಮುನ್ನವೇ, ಗಂಡ ಎರಡನೇ ಮದುವೆಯಾಗುತ್ತಿರುವ ವಿಷಯ ತಿಳಿದ ಪತ್ನಿ ನಾಗಮಣಿ ಪೊಲೀಸರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದರು. ಪೊಲೀಸರು ತಕ್ಷಣವೇ ವರ ಸುರೇಶ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದು, ಮದುವೆ ಸಮಾರಂಭ ಸ್ಥಗಿತಗೊಂಡಿತು. ಈ ಕುರಿತು ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.