ಬೀದರ್ ,ಮಾರ್ಚ್ 24:ಭವಿಷ್ಯದ ವೈದ್ಯನಾಗಬೇಕಿದ್ದ ಯುವಕನೊಬ್ಬ ಆನ್ಲೈನ್ ಗೇಮ್ ಚಟಕ್ಕೆ ಬಲಿಯಾಗಿರುವ ಮನಕಲಕುವ ಘಟನೆ ಜಿಲ್ಲೆಯ ಬ್ರಿಮ್ಸ್ (BRIMS) ವೈದ್ಯಕೀಯ ಕಾಲೇಜು ವಸತಿ ನಿಲಯದಲ್ಲಿ ಮಂಗಳವಾರ ನಡೆದಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಲಗರ್ ತಾಂಡಾ (ಪಾಲತೆ ತಾಂಡಾ) ನಿವಾಸಿ ಅನಿಷ್ಕಾರ್ ಚೌಹಾಣ್ (21) ಮೃತಪಟ್ಟ ದುರ್ದೈವಿ. ಈತ ಬೀದರ್ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ವಸತಿ ನಿಲಯದ ತನ್ನ ಕೊಠಡಿಯಲ್ಲೇ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯ ಕುರಿತು ಮಾಹಿತಿ ಪಡೆದ ತಕ್ಷಣ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪ್ರದೀಪ್ ಗುಂಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ವಿದ್ಯಾರ್ಥಿ ಅನಿಷ್ಕಾರ್ ಆನ್ಲೈನ್ ಗೇಮ್ಗಳ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ. ಗೇಮ್ನಲ್ಲಿ ಹಣ ಕಳೆದುಕೊಂಡಿದ್ದರಿಂದ ತೀವ್ರ ಮನನೊಂದು ಈ ಆತ್ಮಹತ್ಯೆಯ ನಿರ್ಧಾರ ತಳೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೀದರ್ ನ್ಯೂ ಟೌನ್ ಪೊಲೀಸರು ಹಾಗೂ ವಿಧಿವಿಜ್ಞಾನ (Forensic) ತಂಡ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಅಂತಿಮ ವರ್ಷದ ಓದಿನಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿಯ ಅಕಾಲಿಕ ಸಾವು ಸಹಪಾಠಿಗಳು ಹಾಗೂ ಶಿಕ್ಷಕರಲ್ಲಿ ತೀವ್ರ ಆಘಾತ ಮೂಡಿಸಿದೆ. ವೈದ್ಯನಾಗಿ ಮನೆಗೆ ಮರಳುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.