ಬೆಂಗಳೂರು/ಮೂಡುಬಿದಿರೆ ಎಪ್ರಿಲ್ 01: : ಶಿಕ್ಷಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಮೂಡುಬಿದಿರೆಯ ಅಮಾನತುಗೊಂಡ ಇನ್ಸ್ಪೆಕ್ಟರ್ ಸಂದೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಆರೋಪಿ ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. “ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು ಅಧಿಕಾರದ ದುರುಪಯೋಗವಲ್ಲವೇ?” ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಮೂಡಬಿದಿರೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಸಂದೇಶ್ ಅವರ ಮೇಲೆ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಸಂದೇಶ್ ಪರ ವಕೀಲರು, “ಇದು ಒಪ್ಪಿತ ಸಂಬಂಧವಾಗಿತ್ತು, ಅತ್ಯಾಚಾರಕ್ಕೆ ಯಾವುದೇ ಆಧಾರಗಳಿಲ್ಲ” ಎಂದು ವಾದಿಸಿದರು. ಈ ವಾದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, ತನಿಖೆಗೆ ಮಧ್ಯಂತರ ತಡೆ ನೀಡಲು ಅಥವಾ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿ, ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ಅವಧಿಯಲ್ಲಿ ಅಂದರೆ 2018 ರಿಂದ 2023ರ ವರೆಗೆ ಸಂದೇಶ್ ಅವರು ತಮ್ಮ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಶಿಕ್ಷಕಿಯೊಬ್ಬರು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಗಳ ಕುರಿತು ಬೆದರಿಸಿ, ಜೀವ ಭಯ ಹಾಕಿ ಸತತ 5 ವರ್ಷ ಲೈಂಗಿಕ ಶೋಷಣೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಇಬ್ಬರು ಮಹಿಳೆಯರು ಇವರ ಮೇಲೆ ಇಂತಹದೇ ಆರೋಪ ಮಾಡಿದ್ದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.