ಮಂಗಳೂರು ನವೆಂಬರ್ 16: ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಓ ಆಗಿ ರಾಘವೇಂದ್ರ ಎಸ್ ಭಟ್ ಅವರನ್ನು ಇನ್ನೂ ಒಂದು ವರ್ಷ ಮುಂದುವರೆಸಲಾಗಿದೆ. ನವೆಂಬರ್ 16, 2025 ರಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ಬ್ಯಾಂಕಿನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.


ಕಂಪನಿಯು ಜುಲೈ 16, 2025 ರಂದು ಮೂರು ತಿಂಗಳ ಮಧ್ಯಂತರ ಅವಧಿಗೆ ಭಟ್ ಅವರನ್ನು ನೇಮಿಸಿದ ನಂತರ ಇದೀಗ ಮತ್ತೆ ಒಂದು ವರ್ಷ ಅವರನ್ನೇ ಮುಂದುವರೆಸಲು ತೀರ್ಮಾನಿಸಿದೆ. ರಾಘವೇಂದ್ರ ಎಸ್‌. ಭಟ್‌ ಅವರು ಬ್ಯಾಂಕಿಂಗ್‌, ಹಣಕಾಸು ಮತ್ತು ಕೃಷಿ ಕ್ಷೇತ್ರಗಳ ಸಹಿತ ವಿವಿಧ ವೃತ್ತಿಪರ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. ರೈತ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಬ್ಯಾಂಕ್‌ನ ಸೇವೆಯ ಅವಧಿಯಲ್ಲಿ ಮಾನವ ಸಂಪನ್ಮೂಲ (ಎಚ್‌ ಆರ್‌), ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಡಿಜಿಟಲ್‌ ಬ್ಯಾಂಕಿಂಗ್‌, ಖಜಾನೆ ಮತ್ತು ವಿದೇಶಿ ವಿನಿಮಯ ಕಾರ್ಯಾಚರಣೆಗಳು, ವಿಮೆಗಳು ಮತ್ತು ಗ್ರಾಮೀಣ ಆರ್ಥಿಕತೆ ಸೇರಿದಂತೆ ಬ್ಯಾಂಕಿಂಗ್‌ ಮತ್ತು ಹಣಕಾಸು ಸೇರಿದಂತೆ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಅನುಭವ ಗಳಿಸಿದ್ದಾರೆ. ಅವರ ನಾಯಕತ್ವವು ಬ್ಯಾಂಕ್‌ ನಿರಂತರ ಬೆಳವಣಿಗೆ ಮತ್ತು ಯಶಸ್ಸಿನತ್ತ ಸಾಗುವ ವಿಶ್ವಾಸವಿದೆ ಎಂದು ಕರ್ಣಾಟಕ ಬ್ಯಾಂಕ್‌ ನ ಪ್ರಕಟನೆ ತಿಳಿಸಿದೆ.

ನೇಮಕಗೊಂಡ ರಾಘವೇಂದ್ರ ಎಸ್‌. ಭಟ್‌ ಅವರು ಸಂತಸವನ್ನು ವ್ಯಕ್ತಪಡಿಸುತ್ತ ಎಲ್ಲ ಪಾಲುದಾರರ ನಿರೀಕ್ಷೆಗಳನ್ನು ಪೂರೈಸುವ ಭರವಸೆ ವ್ಯಕ್ತಪಡಿಸಿದ್ದಾರೆ

Share Information