ಕಾರ್ಕಳ, ಮಾರ್ಚ್ 24: ತಾಲೂಕಿನ ಮಾಳ ಮುಳ್ಳೂರು ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಾವು ಹಿಡಿದು ಕಾಡಿಗೆ ಬಿಡಲು ತೆರಳುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿ, ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೃತನನ್ನು ನವೀನ್ ಬಜಗೋಳಿ ಎಂದು ಗುರುತಿಸಲಾಗಿದೆ. ಅವರು ವೃತ್ತಿಯಿಂದ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರೆ, ಜೊತೆಗೆ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ಇಂದು ಬೆಳಿಗ್ಗೆ ಹಾವು ಹಿಡಿದು ಅದನ್ನು ಕಾಡಿನಲ್ಲಿ ಬಿಡುವ ಉದ್ದೇಶದಿಂದ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿಯ ತೀವ್ರತೆಗೆ ನವೀನ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟರ್ನಲ್ಲಿದ್ದ ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.